Breaking News
Home / ರಾಜಕೀಯ / ಯುವತಿ ಹೇಳಿಕೆ ದಾಖಲು ; ನ್ಯಾಯಾಧೀಶರ ಮುಂದೆ ಹಾಜರು

ಯುವತಿ ಹೇಳಿಕೆ ದಾಖಲು ; ನ್ಯಾಯಾಧೀಶರ ಮುಂದೆ ಹಾಜರು

Spread the love

ಬೆಂಗಳೂರು: ಇಪ್ಪತ್ತೂಂಬತ್ತು ದಿನಗಳಿಂದ ರಾಷ್ಟ್ರಾದ್ಯಂತ ಸುದ್ದಿಯಾಗಿರುವ ರಮೇಶ್‌ ಜಾರಕಿಹೊಳಿ ಅವರ ವಿವಾದಿತ ಸಿ.ಡಿ. ಪ್ರಕರಣದ ಕಣ್ಣಾಮುಚ್ಚಾಲೆ ಆಟಕ್ಕೆ ಮಂಗಳವಾರ ಬಹುತೇಕ ತೆರೆಬಿದ್ದಿದೆ.

ಸಿ.ಡಿ.ಯಲ್ಲಿದ್ದಳು ಎನ್ನಲಾದ ಯುವತಿ ಮಂಗಳವಾರ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಎಸ್‌ಐಟಿ ಸಂಜೆ ವೇಳೆಗೆ ಯುವತಿಯನ್ನು ಆಡುಗೋಡಿಯಲ್ಲಿ ಇರುವ ಟೆಕ್ನಿಕಲ್‌ ಸೆಲ್‌ಗೆ ಕರೆದೊಯ್ದು ವಿಚಾರಣೆ ನಡೆಸಿತು. ಈ ವೇಳೆ ಅವರು ರಮೇಶ್‌ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬುಧವಾರ ಬೆಳಗ್ಗೆ 10 ಗಂಟೆಗೆ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ವಿಚಾರಣೆ ವೇಳೆ ಪೊಲೀಸರ ಪ್ರತೀ ಪ್ರಶ್ನೆಗೂ ಯುವತಿ ಉತ್ತರ ನೀಡಿದ್ದಾಳೆ ಎನ್ನಲಾಗಿದೆ. ಅಲ್ಲದೆ, ತನ್ನ ಹೆತ್ತವರು ರಮೇಶ್‌ ಜಾರಕಿಹೊಳಿ ಬೆಂಬಲಿಗರ ಒತ್ತಡ ಮತ್ತು ಬೆದರಿಕೆಯಿಂದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಜೀವ ಭಯದಿಂದ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ಸುರಕ್ಷಿತವಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ರಮೇಶ್‌ ಜಾರಕಿಹೊಳಿಗೆ ಕಾನೂನು ಕಂಟಕ ಎದುರಾಗಿದ್ದು, ಬಂಧನ ಭೀತಿ ಇದೆ ಎನ್ನಲಾಗಿದೆ.
ನೃಪತುಂಗ ರಸ್ತೆ ಬಳಿಯ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯದಲ್ಲಿ ಆಕೆ ಹೇಳಿಕೆ ದಾಖಲಿಸಬೇಕಿತ್ತು. ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಅಧಿಕ ಜನಸಂದಣಿ ಬೆಳಗ್ಗೆಯಿಂದಲೇ ಸೇರಿತ್ತು. ಅತೀ ಸೂಕ್ಷ್ಮ ಪ್ರಕರಣ ಹಾಗೂ ಸಂತ್ರಸ್ತೆಯ ಭದ್ರತೆಯ ದೃಷ್ಟಿಯಿಂದ ಎಸ್‌ಐಟಿ ತಂಡವು ಸ್ಥಳದ ಬದಲಾಯಿಸುವಂತೆ ನ್ಯಾಯಾಧೀಶರು ಹಾಗೂ ಡೆಪ್ಯೂಟಿ ರಿಜಿಸ್ಟ್ರಾರ್‌ರನ್ನು ಕೋರಿತು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ನಿಯೋಜಿತ ಸ್ಥಳದ ಬದಲು ವಸಂತನಗರದ ಗುರುನಾನಕ್‌ ಭವನದಲ್ಲಿ ಕೋವಿಡ್‌-19 ಹಿನ್ನೆಲೆಯಲ್ಲಿ ರಚಿಸಲಾಗಿದ್ದ ವಿಶೇಷ ಕೋರ್ಟ್‌ ಕೊಠಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ತೆರಳಿದರು.

ಅಪರಾಹ್ನ 3ರ ಸುಮಾರಿಗೆ ತನ್ನ ಪರ ವಕೀಲರ ತಂಡದ ಜತೆ ಆಗಮಿಸಿದ ಸಂತ್ರಸ್ತೆ, ಸಂಜೆ 5.20ರ ವರೆಗೆ ನ್ಯಾಯಾಧೀಶರ
ಎದುರು 20ಕ್ಕೂ ಅಧಿಕ ಪುಟಗಳ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 164 ಅಡಿಯಲ್ಲಿ ಯುವತಿ ಸ್ವ-ಇಚ್ಛೆಯ ಹೇಳಿಕೆ ದಾಖಲಿಸಿದ್ದರಿಂದ ಮತ್ತು ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿಧಿಸಿದ ನಿಯಮಗಳಂತೆ ನ್ಯಾಯಾಧೀಶರು, ಬೆರಳಚ್ಚುಗಾರರು ಮತ್ತು ಸಂತ್ರಸ್ತೆ ಮಾತ್ರ ಇದ್ದು, ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಆ ಬಳಿಕ ಎಸ್‌ಐಟಿ ತನಿಖಾಧಿಕಾರಿ ಕವಿತಾ ಅವರು ಆಕೆಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಕೋರ್ಟ್‌ ಯುವತಿಯ ಒಪ್ಪಿಗೆ ಕೇಳಿತು. ಯುವತಿ ಒಪ್ಪಿಗೆ ಸೂಚಿಸಿದ್ದರಿಂದ ಕೋರ್ಟ್‌ ಆಕೆಯನ್ನು ಎಸ್‌ಐಟಿ ಗೆ ಒಪ್ಪಿಸಿತು.

ಹೇಳಿಕೆ ದಾಖಲಿಸಲು ಸೂಚನೆ
ಯುವತಿ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಿದ್ದು, ಎಸಿಪಿ ಕವಿತಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಮಂಗಳವಾರ ಬೆಳಗ್ಗೆ 24ನೇ ಎಸಿಎಂಎಎಂ ಕೋರ್ಟ್‌ಗೆ ಎಸಿಪಿ ಕವಿತಾ ಮತ್ತು ಕಬ್ಬನ್‌
ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್‌ ಮಾರುತಿ ಆಗಮಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಅಪರಾಹ್ನ 3ಕ್ಕೆ ಹೇಳಿಕೆಗೆ ಸಮಯ ನಿಗದಿ ಪಡಿಸಿತ್ತು. ಮೊದಲು ನಮ್ಮ ವಿಚಾರಣೆಗೆ ಅನುಮತಿ ನೀಡ ಬೇಕು ಎಂದು ಎಸ್‌ಐಟಿ ಮನವಿ ಮಾಡಿತು. ಯುವತಿ ಎಸ್‌ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ನಮ್ಮ ಎದುರು ಹೇಳಿಕೆ ದಾಖಲಿಸಲಿ, ಬಳಿಕ ಎಸ್‌ಐಟಿ ವಿಚಾರಣೆ ನಡೆಯಲಿ ಎಂದು ನ್ಯಾಯಾಲಯ ಹೇಳಿತು.

ಏನಿದು 164 ಸಿಆರ್‌ಪಿಸಿ?
ಆರೋಪಿತರು ಅಥವಾ ಎದುರುದಾರರಿಂದ ಬೆದರಿಕೆ ಇದ್ದರೆ ತಾವು ನೀಡಿದ ದೂರಿನ ಆಧಾರದ ಮೇಲೆ ನೇರವಾಗಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗಿ ಹೇಳಿಕೆ ದಾಖಲಿಸಲು ಸಿಆರ್‌ಪಿಸಿ 164ರಡಿ ಅವಕಾಶವಿದೆ. ಇದರಡಿ ಪೊಲೀಸರ ಎದುರು ನೀಡಿದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿ ನಿರಾಕರಿಸಬಹುದು ಅಥವಾ ತದ್ವಿರುದ್ಧ ಹೇಳಿಕೆ ನೀಡಬಹುದು. ಆದರೆ ಬದಲಾಯಿಸುವಂತಿಲ್ಲ. ರಾಜಿ-ಸಂಧಾನಕ್ಕೂ ಅವಕಾಶವಿಲ್ಲ. ಒಂದೊಮ್ಮೆ ಹೇಳಿಕೆ ನೀಡಿದ ದೂರುದಾರರು ಅಥವಾ ಸಂತ್ರಸ್ತೆ ಅದಕ್ಕೆ ವಿರುದ್ಧ ಹೇಳಿಕೆ ನೀಡಿದರೆ ಇಲ್ಲವೇ ಆ ಹೇಳಿಕೆ ತಪ್ಪು ಎಂದು ಮನವರಿಕೆಯಾದರೆ ನ್ಯಾಯಾಲಯ ಸ್ವಯಂ ಕ್ರಮ ಜರಗಿಸಬಹುದು.

ಮುಂದಿನ ತನಿಖೆ ಹೇಗೆ?
ಸಿಆರ್‌ಪಿಸಿ 164 ಪ್ರಕಾರ ನ್ಯಾಯಾಧೀಶರ ಎದುರು ಯುವತಿ ನೀಡಿರುವ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಇದನ್ನು ಆಧರಿಸಿ ಬುಧವಾರ ಎಸ್‌ಐಟಿ ವಿಚಾರಣೆ ಆರಂಭಿಸಲಿದೆ. ಒಂದು ವೇಳೆ ಸ್ವಇಚ್ಛೆಯ ಹೇಳಿಕೆಗೂ ಎಸ್‌ಐಟಿ ವಿಚಾರಣೆಯ ಸಂದರ್ಭ ನೀಡಿದ ಹೇಳಿಕೆಗೂ ವ್ಯತ್ಯಾಸ ಕಂಡುಬಂದಲ್ಲಿ ವಿಚಾರಣೆ ತೀವ್ರಗೊಳಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ವೀಡಿಯೋ ಸಂಬಂಧ ಈಗಾಗಲೇ ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ಪೋಷಕರು, ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ, ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಮೂರು ಪ್ರಕರಣಗಳ ತನಿಖೆ ನಡೆಸಬೇಕಿದೆ. ಯುವತಿ ಹಾಜರಾಗಿರುವುದರಿಂದ ಬೆಳಗಾವಿಯಲ್ಲಿ ದಾಖಲಾದ ಅಪಹರಣ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಬೆಂಗಳೂರಿಗೆ ಬಂದು ಯುವತಿಯ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ಇತ್ಯರ್ಥಪಡಿಸುವ ಸಾಧ್ಯತೆಗಳಿವೆ.

ಅಲ್ಲದೆ ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿರುವ ದೂರಿನಲ್ಲಿ ಅಪರಿಚಿತ ವ್ಯಕ್ತಿಗಳು ಇದ್ದಾರೆ ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಮೂರು ಬಾರಿ ಮಾಜಿ ಸಚಿವರನ್ನು ವಿಚಾರಣೆ ನಡೆಸಲಾಗಿದೆ. ಈ ವೇಳೆ ಯುವತಿಯ ಹೆಸರು ಅಥವಾ ಗುರುತನ್ನು ಮಾಜಿ ಸಚಿವರು ಉಲ್ಲೇಖೀಸಿ, ಈಕೆಯೇ ಬ್ಲಾಕ್‌ ಮೇಲ್‌ ತಂಡದಲ್ಲಿ ಇದ್ದರು ಎಂದು ಹೇಳಿಕೆ ನೀಡಿದ್ದರೆ, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ