ಬೆಂಗಳೂರು: ಕೊರೊನಾ ವೈರಸ್ ಮಾಧ್ಯಮದವರ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ನಿನ್ನೆ ಮುಂಬೈನಲ್ಲಿ 53 ಪತ್ರಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಇತರೆ ನಗರಗಳ ಪತ್ರಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ರಿಸ್ಕ್ ತೆಗೆದುಕೊಂಡು ವರದಿ ಮಾಡುವ ಪತ್ರಕರ್ತರು ಬಹಳ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಮುಂಬೈ ಘಟನೆ ಬಳಿಕ ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಮುಂದಾಗಿದೆ.
ಮುಂಬೈ ಪ್ರಕರಣದ ಬಗ್ಗೆ ಪರ್ತಕರ್ತರಿಂದ ಮಾಹಿತಿ ಪಡೆದುಕೊಂಡ ಉನ್ನತ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕೋವಿಡ್ ತಪಾಸಣಾ ಶಿಬಿರದಲ್ಲಿ 177 ಮಂದಿ ಪೈಕಿ 53 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಹೀಗಾಗಿ ರಾಜ್ಯದಲ್ಲೂ ಪತ್ರಕರ್ತರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸುವಂತೆ ಸಿಎಂಗೆ ಕೋರಿದ್ದರು. ಸುರೇಶ್ಕುಮಾರ್ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ, ವಾರ್ತಾ ಇಲಾಖೆ ಆಯುಕ್ತರು ತಕ್ಷಣ ಎಲ್ಲ ಪತ್ರಕರ್ತರಿಗಾಗಿ ಅಗತ್ಯ ತಪಾಸಣಾ ಶಿಬಿರ ಏರ್ಪಡಿಸುವಂತೆ ಸೂಚನೆ ನೀಡಿದ್ದಾರೆ