ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ತನಗೆ ಸೇರಿದ್ದು ಎಂದು ಮೊಂಡುತನ ತೋರುತ್ತಿದ್ದ ಪಾಕಿಸ್ತಾನವು ಸದ್ಯ ಭಾರತದ ಭಾಗವೆಂದು ಘೋಷಿಸಿದೆ.
ಇತ್ತೀಚೆಗೆ ಭಾರತದ ಹವಾಮಾನ ಬುಲೆಟಿನ್‍ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸೇರಿಸಿದಾಗ ಪಾಕಿಸ್ತಾನ ಸಾಕಷ್ಟು ಆಘಾತಕ್ಕೊಳಗಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತ ತನ್ನ ಹೇಳಿಕೆಯನ್ನು ಅವರು ಪುನರಾವರ್ತಿಸಲು ಪ್ರಾರಂಭಿಸಿತ್ತು. ಜೊತೆಗೆ ಪಾಕ್ ತಮ್ಮ ಹವಾಮಾನ ಬುಲೆಟಿನ್‍ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ತಾಪಮಾನವನ್ನು ಹೇಳುವ ಮೂಲಕ ಆಕ್ರೋಶ ಹೊರ ಹಾಕಿತ್ತು. ಆದರೆ ಈಗ ತಾಂತ್ರಿಕ ದೋಷದಿಂದಾಗಿ ಪಾಕಿಸ್ತಾನವು ಪಿಒಕೆಯನ್ನು ಭಾರತದೊಂದಿಗೆ ಸೇರಿಸಿದೆ.
ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಸರ್ಕಾರವು ವೆಬ್‍ಸೈಟ್ ಆರಂಭಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗವೆಂದು ವಿವರಿಸಲಾಗಿದೆ. ಇಲ್ಲಿಯವರೆಗೆ ಪಾಕಿಸ್ತಾನವು ಪಿಒಕೆ ಮೇಲೆ ತನ್ನ ಅಧಿಕಾರ ಚಲಾಯಿಸಲು ಯತ್ನಿಸಿ ಅಲ್ಲಿ ಚುನಾವಣೆ ನಡೆಸಲು ಆದೇಶಿಸಿತ್ತು. ಈ ಬಗ್ಗೆ ಭಾರತವು ತೀವ್ರ ಪ್ರತಿಭಟನೆ ನಡೆಸಿತ್ತು. ಈಗ ಅಧಿಕೃತ ವೆಬ್‍ಸೈಟ್‍ನಲ್ಲಿ ಪಿಒಕೆಯನ್ನು ಭಾರತದ ಭಾಗವೆಂದು ಇಮ್ರಾನ್ ಸರ್ಕಾರ ವಿವರಿಸಿದೆ.
Covid.gov.pok ಎಂಬ ವೆಬ್‍ಸೈಟ್ ಗ್ರಾಫಿಕ್ಸ್ ಮೂಲಕ ಕೊರೊನಾದ ವ್ಯಾಪ್ತಿಯನ್ನು ವಿವರಿಸಲಾಗಿದೆ. ಈ ನಕ್ಷೆಯ ಫೋಟೋ ನೋಡಿದ ತಕ್ಷಣವೇ ನೆಟ್ಟಿಗರು ಟ್ವಿಟರ್ ನಲ್ಲಿ ಪಾಕಿಸ್ತಾನ ಸರ್ಕಾರವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಇದಕ್ಕೂ ಮುನ್ನ ಪಾಕಿಸ್ತಾನವು ಕೊರೊನಾ ಸೋಂಕಿತರನ್ನು ಪಿಒಕೆಗೆ ಶಿಫ್ಟ್ ಮಾಡಲು ಮುಂದಾಗಿತ್ತು. ಇದಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನದ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿತ್ತು.
ಸದ್ಯದ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ 48 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 1,017 ಜನರು ಮೃತಪಟ್ಟಿದ್ದರೆ, 14 ಸಾವಿರ ಜನರು ಗುಣಮುಖರಾಗಿದ್ದಾರೆ.