ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಗ್ರೀನ್‍ಝೋನ್‍ನಲ್ಲಿದ್ದವು. ನಾವು ಯಾವಾಗ ಮುಂಬೈ ಮತ್ತು ದುಬೈನವರನ್ನು ಕರೆಸಿಕೊಂಡೆವೋ ಅಂದಿನಿಂದ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎಂದರೆ ಕ್ವಾರಂಟೈನ್‍ಗೆ ಒಳಪಡಿಸುವುದು.
ಮೂಡಿಗೆರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ವಾರಂಟೈನ್‍ಗೆ ಮಾಡಬೇಕಾಗುತ್ತೆ. ವೈದ್ಯರಿಗೂ ಪಾಸಿಟಿವ್ ಬಂದ ಕಾರಣ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 800 ಜನರನ್ನು ನಾವು ಗುರುತಿಸಿದ್ದೀವಿ. ಇವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡೋದು ಕಷ್ಟದ ಕೆಲಸ. ಅಷ್ಟೊಂದು ವ್ಯವಸ್ಥೆಗಳು ಮೂಡಿಗೆರೆ ತಾಲೂಕಿನಲ್ಲಿ ಇಲ್ಲ. ಹೋಟೆಲ್, ಸಿಂಗಲ್ ರೂಂಗಳು ಕೂಡ ಇಲ್ಲ. ಹಾಗಾಗಿ, ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಗಳೂರು ಹಾಗೂ ಶಿವಮೊಗ್ಗದ ಕೆಲ ಭಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಿಂದ ಅವರಿಗೆ ವಿನಾಯಿತಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದಾರೆ.
ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಮನೆಯಲ್ಲೇ ಅವರಿಗೆ ಕ್ವಾರಂಟೈನ್ ಮಾಡಬೇಕು. ಸಾಂಸ್ಥಿಕ ಕ್ವಾರಂಟೈನ್ ಮನೆಗಿಂತ ಡೇಂಜರ್ ಆಗಿದೆ. ಒಂದೊಂದು ರೂಮಿನಲ್ಲಿ 10-20 ಜನ ಇರುತ್ತಾರೆ. ಆದ್ದರಿಂದ ಒಬ್ಬರಿಗೆ ಸೋಂಕು ಬಂದರೂ ಉಳಿದವರಿಗೆ ಬರುವ ಸಾಧ್ಯತೆ ಇದೆ. ಮಲೆನಾಡಿನ ಒಂಟಿ ಮನೆ ಹಾಗೂ ಮಲೆನಾಡು ಭಾಗದಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಸಂಸದರು ಮನವಿ ಮಾಡಿದ್ದಾರೆ.
ಸಂಸದರ ಮನವಿಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ಬಳಿಯೂ ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನಕ್ಕೆ ಸಹಾಯವಾಗುತ್ತದೆ. ಅವರು ಮನೆಯಲ್ಲೇ ಇರಬೇಕು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾರೂ ಮನೆಯಿಂದ ಆಚೆ ಬರಬಾರದೆಂದು ಜನಸಾಮಾನ್ಯರಿಗೂ ಮನವಿ ಮಾಡಿಕೊಂಡಿದ್ದಾರೆ.