ಬೆಂಗಳೂರು: ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಒಂದೊಳ್ಳೆ ಬ್ರೇಕ್‍ಗಾಗಿ ಎದುರು ನೋಡುತ್ತಿದ್ದು, ಉತ್ತಮ ಕಥೆಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಚಂದನವನದ ಖ್ಯಾತ ನಿರ್ದೇಶಕರೊಬ್ಬರು ಅಭಿಷೇಕ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮೂಲಕ ಒಂದೊಳ್ಳೆ ಸಿನಿಮಾ ಮಾಡಲು ಅಭಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಸ್ಯಾಂಡಲ್‍ವುಡ್‍ನಲ್ಲಿ ಬೆಳೆಯಬೇಕು ಎಂಬುದು ಅಂಬರೀಶ್ ಅವರ ಮಹದಾಸೆಯಾಗಿತ್ತು. ಹೀಗಾಗಿಯೇ ಅಮರ್ ಸಿನಿಮಾಕ್ಕೆ ಸ್ವತಃ ಅವರೇ ಮಹೂರ್ತ ಮಾಡಿದ್ದರು. ನಾಯಕ ನಟನಾಗಿ ತಮ್ಮ ಮಗನನ್ನು ಅಂಬರೀಶ್ ಸ್ಯಾಂಡಲ್‍ವುಡ್‍ಗೆ ಪರಿಚಯಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ನಂತರ ಸಿನಿಮಾ ಬಿಡುಗಡೆಯಾದರೂ ಇಷ್ಟೇನು ಯಶಸ್ಸು ಕಾಣಲಿಲ್ಲ. ಹೀಗಾಗಿ ಒಂದೊಳ್ಳೆ ಬ್ರೇಕ್‍ಗೆ ಅಭಿಷೇಕ್ ಕಾಯುತ್ತಿದ್ದಾರೆ.
ಇದೀಗ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕರೊಂದಿಗೆ ಅಭಿ ಕೆಲಸ ಮಾಡಲಿದ್ದಾರಂತೆ. ಈ ಕುರಿತು ಸ್ಯಾಂಡಲ್‍ವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದ್ದು, ತಮ್ಮ ರಾ ಸಿನಿಮಾಗಳ ಮೂಲಕ ಸುಕ್ಕಾ ಸೂರಿ, ದುನಿಯಾ ಸೂರಿ ಎಂದೇ ಪ್ರಸಿದ್ಧಿ ಪಡೆದಿರುವ ಸೂರಿ ಅಭಿಷೇಕ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈ ಕುರಿತು ಚಂದನವನದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದೆಯಂತೆ. ಸೂರಿ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರಂತೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ಚಿತ್ರದ ಕೆಲಸಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
ಬ್ರೇಕ್‍ಗಾಗಿ ಕಾಯುತ್ತಿರುವ ಅಭಿಷೇಕ್, ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಸೂರಿ ಸಹ ಹಿಟ್ ಸಿನಿಮಾಗಳನ್ನು ನೀಡಿದ್ದು, ಕೇವಲ ಸ್ಟಾರ್ ನಟರು ಮಾತ್ರವಲ್ಲದೆ ಹೊಸಬರ ಸಿನಿಮಾಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಹೊಸಬರನ್ನೂ ಬೆಳೆಸಿದ್ದಾರೆ. ಇದಕ್ಕೆ ಉದಾಹರಣೆಯೇ ದುನಿಯಾ ಚಿತ್ರ. ವಿಜಯ್ ಆಗಿನ್ನೂ ಹೊಸಬರು, ಈ ಸಿನಿಮಾ ಮೂಲಕ ಸೂರಿ ದುನಿಯಾ ವಿಜಯ್‍ಗೆ ಬಿಗ್ ಬ್ರೇಕ್ ನೀಡಿದರು. ಅಲ್ಲದೆ ಕೆಂಡಸಂಪಿಗೆ ಚಿತ್ರದ ಮೂಲಕ ಸಹ ಹೊಸ ನಟರಿಗೆ ಅವಕಾಶ ಕಲ್ಪಿಸಿದ್ದರು. ಇದೀಗ ಅಭಿಷೇಕ್ ಜೊತೆ ಒಂದಾಗುತ್ತಿದ್ದು, ಯಾವ ಮಟ್ಟಕ್ಕೆ ಸಿನಿಮಾ ತಯಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಮೇ 29ರಂದು ಅಂಬರೀಷ್ ಜನ್ಮದಿನ. ಈ ವೇಳೆ ಚಿತ್ರದ ಕುರಿತು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಪಾಪ್‍ಕಾರ್ನ್ ಮಂಕಿ ಟೈಗರ್ ರಿಲೀಸ್ ನಂತರ ಸೂರಿ ಕಾಗೆ ಬಂಗಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇದೀಗ ಅಭಿಷೇಕ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದು, ಯಾವ ಸಿನಿಮಾದ ಚಿತ್ರೀಕರಣವನ್ನು ಮೊದಲು ಆರಂಭಿಸುತ್ತಾರೆ ಕಾದು ನೋಡಬೇಕಿದೆ.