ನವದೆಹಲಿ: ಸರ್ಕಾರಗಳ ಟೆಂಡರ್ ಗಳಲ್ಲಿ ಭಾಗವಹಿಸಿರುವ ಚೀನಾದ ಎಲ್ಲ ಕಂಪನಿಗಳಿಗೆ ನಿಷೇಧ ಹೇರಬೇಕು. ಅಲ್ಲದೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜನರಿಗೆ ಪ್ರೋತ್ಸಾಹ ನೀಡಬೇಕು ಎಂದು ಆರ್‍ಎಸ್‍ಎಸ್ ಸಂಯೋಜಿತ ಸ್ವದೇಶಿ ಜಾಗರಣ್ ಮಂಚ್(ಎಸ್‍ಜೆಎಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಚೀನಾ ಉಪಟಳ ಹೆಚ್ಚುತ್ತಿದ್ದು, ಜೂನ್ 15 ಹಾಗೂ 16ರಂದು ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ದಾಳಿ, ಪ್ರತಿ ದಾಳಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇವರಿಗೆ ಗೌರವ ಸಲ್ಲಿಸಬೇಕಾದರೆ ದೇಶದಲ್ಲಿ ಚೀನಾ ಕಂಪನಿ ಹಾಗೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಸ್ವದೇಶಿ ಜಾಗರಣ್ ಮಂಚ್‍ನ ಅಶ್ವಿನಿ ಮಹಾಜನ್ ಆಗ್ರಹಿಸಿದ್ದಾರೆ. ಅಲ್ಲದೆ ನಟ, ನಟಿಯರು ಹಾಗೂ ಕ್ರಿಕೆಟ್ ಆಟಗಾರರು ಸಹ ಚೀನಾ ಉತ್ಪನ್ನಗಳನ್ನು ಪ್ರೋತ್ಸಾಹಿಸದಂತೆ ತಿಳಿಸಿದ್ದಾರೆ.
ಎಸ್‍ಜೆಎಂ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕುವುದರ ಜೊತೆಗೆ ಕೇಂದ್ರ ಸರ್ಕಾರದ ಎಲ್ಲ ಟೆಂಡರ್‍ಗಳಿಂದ ಚೀನಾ ಕಂಪನಿಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.