ಸವಣೂರ: ಲಾಕ್ ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ತಾಲೂಕಿನ ರೈತರ ತರಕಾರಿ ಹಾಗೂ ಹಣ್ಣು ಬೆಳೆಗಳ ಕುರಿತು ಮರು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ರೈತರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಸಮಯದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ರೈತರು ಸಾಕಷ್ಟು ನಷ್ಟಕ್ಕೊಳಗಾಗಿದ್ದಾರೆ. ಕಂದಾಯ ಇಲಾಖೆಯ ವತಿಯಿಂದ ಜನವರಿಯಲ್ಲಿ ಶೇ 10 ರಷ್ಟು ಅರೆಬರೆ ಸಮೀಕ್ಷೆ ಕೈಗೊಂಡು ಶೇ. 90ರಷ್ಟು ರೈತರನ್ನು ಕೈಬಿಟ್ಟ ಕಾರಣ ರೈತರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಕಂದಾಯ ಇಲಾಖೆಯ ಈ ಹಿಂದಿನ ಸಮೀಕ್ಷೆಯನ್ನು ಪರಿಗಣಿಸಿ ಪರಿಹಾರ ಒದಗಿಸಿದಲ್ಲಿ ರೈತರಿಗೆ ಅನ್ಯಾಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಸಂಘಟನೆಗಳು ಸರಕಾರದ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟರ್ಗೆ 25 ಸಾವಿರ, ತರಕಾರಿ ಮತ್ತು ಹಣ್ಣು ಬೆಳೆಗಳಿಗೆ 15 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದ್ದರಿಂದ ತರಕಾರಿ ಹಾಗೂ ಹಣ್ಣು ಬೆಳೆಗಳ ಕುರಿತು ಮರು ಸಮೀಕ್ಷೆ ಕೈಗೊಂಡು ಅನ್ಯಾಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಮನವಿ ನೀಡಿದರು. ತಾಲೂಕಾಧ್ಯಕ್ಷ ಚನ್ನಪ್ಪ ಮರಡೂರ, ಪ್ರದಾನ ಕಾರ್ಯದರ್ಶಿ ರಮೇಶ ದೊಡ್ಡೂರ, ಗೌರವಾಧ್ಯಕ್ಷ ಮಹಾದೆವಪ್ಪ ಅಂಗಡಿ, ನಾಗಪ್ಪ ಹಡಪದ, ಪಕ್ಕಿರಪ್ಪ ಜೋಗೇರ, ರೇಣಪ್ಪ ಆಲದಕಟ್ಟಿ, ನಂದೀಶ ಹಡಪದ, ಸತೀಶ ದೇಸೂರ, ಶೇಕಪ್ಪ ತಳವಾರ, ಸುರೇಶ ತಳವಾರ, ಶೇಕಪ್ಪ ಹಡಪದ, ರವಿ ದೊಡ್ಮನಿ, ಪ್ರಕಾಶ ಬಡಿಗೇರ, ಶಂಕಪ್ಪ ಮರಡೂರ ಸೇರಿದಂತೆ ಇತರರು ಇದ್ದರು.