ಬೆಳಗಾವಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಹಾಗೂ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಹಸಿರು ನಿಶಾನೆ ತೋರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ಜೂನ್ 12) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ನಿಮಿತ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೆರಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆರ್.ಜೆ.ಸತೀಶ ಸಿಂಗ್ ಅವರು ಮಾತನಾಡಿ, ಬಾಲಕಾರ್ಮಿಕ ದಿನವನ್ನು ಪ್ರತಿವರ್ಷದಂತೆ ಈ ವರ್ಷವೂ ಮಾಡಲಾಗುತ್ತಿದ್ದು, ಆದರೆ ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಜಾಗೃತಿ ರಥದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಬಾಲಕಾರ್ಮಿಕ ಪದ್ದತಿಯು ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು ಆ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಅವರು ಮಾತನಾಡಿ, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಚಾಲನೆ ನೀಡಿದ್ದೆವೆ. ಜಾಗೃತಿ ರಥವು ನಗರ ಪ್ರದೇಶ ಮತ್ತು ಬೆಳಗಾವಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಜೂನ್ 12 ರಿಂದ 15 ರವರೆಗೆ ಸಂಚಾರ ಮಾಡಿ ಜಾಗೃತಿ ಮೂಡಿಸುತ್ತದೆ ಎಂದರು.
ಬೆಳಗಾವಿ ನಗರವನ್ನು ಹೊರತುಪಡಿಸಿ ತಾಲೂಕು ಭಾಗದಲ್ಲಿ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. 14ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅಂತಹ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತಿದೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸ, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ, ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗುರ, ತರನ್ನುಮ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.