ಗೋಕಾಕ: ಕೊಣ್ಣೂರು ಪಟ್ಟಣದಲ್ಲಿ 2 ಎಕರೆ ಜಾಗದಲ್ಲಿ ಶೀಘ್ರದಲ್ಲಿ ಮತ್ತೊಂದು 30 ಬೆಡ್ ನೂತನ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದ್ರು.
ಕೊಣ್ಣೂರು ಪಟ್ಟಣದಲ್ಲಿ 6 ಬೆಡ್ ಹೊಂದಿರುವ ನೂತನ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ಯಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಎಂಬ ಭಾವನೆ ಜನರ ಮನದಲ್ಲಿ ಬೇರುರಿದೆ. ಮೊದಲು ಅದನ್ನು ಹೊಡೆದು ಹಾಕಬೇಕು. ನನ್ನ ಮಗ ಸಂತೋಷ ಸರ್ಕಾರಿ ಆಸ್ಪತ್ರೆಯಲ್ಲಿಯೇ ಜನಿಸಿದ್ದಾನೆ, ಅವರ ಮಗ ಕೂಡ ಅಲ್ಲಿಯೇ ಜನಿಸಿದ್ದಾನೆ. ಸರ್ಕಾರಿ ಆಸ್ಪತ್ರೆಗಳು ಇಂದು ಅತ್ಯಂತ ಸುಸಜ್ಜಿತ, ಎಲ್ಲ ಉಪಕರಣ ಹೊಂದಿ ಉತ್ತಮ ಸೇವೆ ಒದಗಿಸುತ್ತಿವೆ ಜನರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
1999ರ ಮೊದಲು ಗೋಕಾಕ ಸರ್ಕಾರಿ ಆಸ್ಪತ್ರೆಯ ಸ್ಥಿತಿ ತುಂಬಾ ಹದಗೆಟ್ಟಿತ್ತು. ಹಂದಿ, ಕತ್ತೆಗಳು ಅಲ್ಲಿ ಬಿಡಾರ ಹೂಡಿದ್ದವು. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಆದ್ಯತೆ ನೀಡಿದ್ದೆ ಸರ್ಕಾರಿ ಆಸ್ಪತ್ರೆಗೆ. ಇಂದು ಗೋಕಾಕ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗೋಕಾಕ ಆಸ್ಪತ್ರೆ, ಸರ್ಕಾರಿ ಕಚೇರಿಗಳು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು. ಅದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಿವೆಪ್ಪಾ ಮಾಳಗಿ, ಬಾಳಗೌಡ ಸುತಗಟ್ಟಿ, ಅಡಿವೆಪ್ಪ, ಶಿವಶಂಕರ್ ಮಳಗಲಿ, ಚಂದ್ರು ಕುಂದರಗಿ, ರಿಯಾಜ್ ಬಾಳಕುಂದ್ರಿ, ಯಲ್ಲಪ್ಪ ತಲ್ಲೂರೆ,ಶಾದೀಕ್ ಇನಾಮದಾರ್, ರಾಜು ಮೊದಗಿ, ಬಾಬು ಬಂಡಿ ಮುಂತಾದವರು ಇದ್ದರು.