Breaking News
Home / ಜಿಲ್ಲೆ / ಬೆಂಗಳೂರು / ಛಲದಂಕಮಲ್ಲನ ಹೋರಾಟದ ಹಾದಿ

ಛಲದಂಕಮಲ್ಲನ ಹೋರಾಟದ ಹಾದಿ

Spread the love

ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಆಯಾ ಕಾಲಘಟ್ಟದಲ್ಲಿ ರಾಜ್ಯವನ್ನಾಳಿದ ನಾಯಕರು ತಮ್ಮದೇ ಆದ ಛಾಪು ಮೂಡಿಸಿದ್ದು, ಜನನಾಯಕ ರಾಗಿ, ಸಮುದಾಯದ ನಾಯಕರಾಗಿ ಗುರುತಿಸಿ ಕೊಂಡಿದ್ದು, ಇನ್ನೂ ರಾಜ್ಯದ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ತೆರೆಯ ಹಿಂದೆ ಸರಿಯುವ ಪ್ರಮುಖ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ ಬಂದಿದೆ. ಹೋರಾಟದಿಂದಲೇ ಅಧಿಕಾರಕ್ಕೆ ಬಂದು, ಅಧಿಕಾರ ನಡೆಸುವಾಗಲೂ ಹೋರಾಟ ನಡೆಸುತ್ತಲೇ ಅಧಿಕಾರ ನಡೆಸುವಂತಾಯಿತು. ಪ್ರತಿಪಕ್ಷದ ನಾಯಕನಾಗಿ ಆಡಳಿತ ಪಕ್ಷದ ವಿರುದ್ದ ಹೋರಾಟ ನಡೆಸಿದರೆ, ಮುಖ್ಯಮಂತ್ರಿಯಾಗಿ ಸ್ವಪಕ್ಷೀಯರ ವಿರುದ್ಧವೇ ಆಂತರಿಕ ಸಂಘರ್ಷ ನಡೆಸಿರುವುದು ದುರಂತ.

ವಚನ ಭ್ರಷ್ಟತೆಯ ಅಸ್ತ್ರ : ಜೆಡಿಎಸ್‌ ತಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ವಚನ ಭ್ರಷ್ಟತೆ ಮಾಡಿತು ಎಂದು ಯಡಿಯೂರಪ್ಪ ರಾಜ್ಯದ ಜನತೆಯ ಮುಂದೆ ಹೋಗಿ ಚುನಾವಣೆ ಎದುರಿಸಿದ ಪರಿಣಾಮ 2008 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ತಂದ ಹೆಗ್ಗಳಿಕೆಗೆ ಯಡಿಯೂರಪ್ಪ ಪಾತ್ರರಾಗುವಂತೆ ಮಾಡಿತು.

ಈ ಸಂದರ್ಭದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದೇ ಇದ್ದುದರಿಂದ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿದರು. ಪಕ್ಷೇತರರ ಬೆಂಬಲದೊಂದಿಗೆ ಸುಗಮ ಸರ್ಕಾರ ನಡೆಯುತ್ತಿದ್ದರೂ, ಜೆಡಿಎಸ್‌ ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಂಡು ರಾಷ್ಟ್ರ ರಾಜಕಾರಣದಲ್ಲಿ “ಆಪರೇಷನ್‌ ಕಮಲ” ಎಂಬ ಹೊಸ ಪದ ಹುಟ್ಟಿಕೊಳ್ಳಲು ಕಾರಣರಾದರು.

ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಮಕ್ಕಳಿಗೆ ಸೈಕಲ್‌ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್‌ ನಂತಹ ಜನಪ್ರಿಯ ಯೋಜನೆ ಜಾರಿಗೆ ತಂದರೂ, ಪಕ್ಷದಲ್ಲಿನ ಆಂತರಿಕ ಸಂಘರ್ಷ ಹಾಗೂ ಅಕ್ರಮ ಗಣಿಗಾರಿಕೆಗೆ ಲಂಚ ಪಡೆದಿರುವ ಆರೋಪ ಅವರನ್ನು ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರುವಂತೆ ಮಾಡಿತು. ದೇಶದಲ್ಲಿ ಅಧಿಕಾರದಲ್ಲಿರುವಾಗಲೇ ಜೈಲು ಸೇರಿದ ಮೊದಲ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೂ ಯಡಿಯೂರಪ್ಪ ಒಳಗಾಗುವಂತಾಯಿತು.

ಕೆಜೆಪಿಯ ಭರವಸೆ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದ ಯಡಿಯೂರಪ್ಪ ತಮ್ಮನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಪಕ್ಷದಿಂದ ಸಿಡಿದೆದ್ದು, ಕರ್ನಾಟಕ ಜನತಾ ಪಕ್ಷ ಕಟ್ಟುವ ಮೂಲಕ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದರು.

ಅಷ್ಟೇ ಅಲ್ಲದೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಸ್ಪರ್ಧಿಸಿ, ಆರೇ ಸ್ಥಾನಗಳನ್ನು ಗೆದ್ದರೂ, ಅಧಿಕಾರದಲ್ಲಿದ್ದ ಬಿಜೆಪಿ 40 ಸ್ಥಾನಕ್ಕೆ ಇಳಿಯುವಂತಾಗಲು ಕಾರಣರಾದರು. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ನೆಲೆಗೊಳ್ಳುವುದು ಕಷ್ಟ ಎಂಬ ಸಂದೇಶ ರವಾನಿಸಿದರು.

ಕೆಜೆಪಿ ಹೆಚ್ಚು ಸ್ಥಾನ ಗೆಲ್ಲದಿದ್ದರೂ, ರಾಜ್ಯದಲ್ಲಿ ಪರ್ಯಾಯವಾಗಿ ಪ್ರಾದೇಶಿಕ ಪಕ್ಷವೊಂದು ಗಟ್ಟಿಗೊಳ್ಳುವ ಸೂಚನೆ ನೀಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್‌ ನೀಡಿದ್ದ ಯಡಿಯೂರಪ್ಪ 2014ರ ಲೋಕಸಭಾ ಚುನಾವಣೆಯ ಸಂದರ್ಭ ಮತ್ತೆ ಬಿಜೆಪಿಗೆ ವಾಪಸ್‌ ಬಂದರು. ಅಲ್ಲದೇ ಬಿಜೆಪಿ ಕೂಡ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 17 ಸ್ಥಾನ ಗೆಲ್ಲುವ ಮೂಲಕ ಮೋದಿ ಪ್ರಧಾನಿಯಾಗಲು ದೊಡ್ಡ ಕೊಡುಗೆ ನೀಡಿದರು. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಹೈಕಮಾಂಡ್‌ ಮತ್ತೆ ಯಡಿಯೂರಪ್ಪ ಅವರನ್ನೇ ನೆಚ್ಚಿಕೊಂಡು ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿತು. ಆಗಲೂ ಸ್ಪಷ್ಟ ಬಹುಮತ ಬಾರದೇ ಬಹುಮತಕ್ಕಾಗಿ ಜೆಡಿಎಸ್‌ ನಾಯಕರ ಬೆಂಬಲದ ನಿರೀಕ್ಷೆಯಲ್ಲಿ ಸರ್ಕಾರ ರಚಿಸಿ ಮೂರೇ ದಿನದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು.

ಆದರೂ. ರಾಜ್ಯದ ಮುಖ್ಯಮಂತ್ರಿ ಆಗಲೇಬೇಕೆಂದು ಹಠಕ್ಕೆ ಬಿದ್ದ ಯಡಿಯೂರಪ್ಪ ಮತ್ತೂಂದು ಬಾರಿ ‘ಆಪರೇಷನ್‌ ಕಮಲ’ ಮೂಲಕ 17 ಜನ ಕಾಂಗ್ರೆಸ್‌ ಜೆಡಿಎಸ್‌ ಶಾಸಕರ ರಾಜೀನಾಮೆ ಕೊಡಿಸಿ ಮೈತ್ರಿ ಸರ್ಕಾರ ಪತನಗೊಳಿಸಿ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ತಮ್ಮ ಆಸೆಯನ್ನು ತಣಿಸಿಕೊಂಡರು. ಆದರೆ, ಅದೂ ಕೂಡ ಹೋರಾಟದ ಹಾದಿಯೇ ಆಯಿತು. ವಲಸಿಗರ ರಕ್ಷಣೆ, ಸ್ವಪಕ್ಷೀಯರ ಕಿರುಕುಳ ಎಲ್ಲವನ್ನೂ ಸಹಿಸಿಕೊಂಡು ಎರಡು ವರ್ಷ ಪೂರೈಸುವಷ್ಟರಲ್ಲಿಯೇ ನೋವಿನ ವಿದಾಯ ಹೇಳು ವಂತಾಯಿತು. ಯಡಿಯೂರಪ್ಪ ಅವರ ವಿದಾಯ ರಾಜ್ಯ ರಾಜಕೀಯ ದಲ್ಲಿನ ಪರ್ವಕಾಲ. ಅವರ ನಿರ್ಗಮನ ಭವಿಷ್ಯದಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟನ್ನೂ ನೀಡಬಹುದು. ಇದೆಲ್ಲ ಪಕ್ಷ ಅವ ರನ್ನು ಹೇಗೆ ನಡೆ ಸಿ ಕೊ ಳ್ಳು ತ್ತದೆ ಎಂಬು ದರ ಮೇಲೆ ನಿಂತಿದೆ ಎಂಬುದು ಮಾತ್ರ ಸತ್ಯ.

ರಾಜಕೀಯ ತಿರುವು :

ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಿರಂತರ ಹೋರಾಟ ನಡೆಸುತ್ತಿದ್ದ ಯಡಿಯೂರಪ್ಪ ಜೆಡಿಯು ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿ ಸ್ವತಃ ತಾವೇ ಸೋಲುಂಡರು. ಆದರೂ. ಛಲ ಬಿಡದ ತ್ರಿವಿಕ್ರಮನಂತೆ ಪಕ್ಷ ಸಂಘಟನೆಯನ್ನು ನಿರಂತರ ಮುಂದುವರಿಸಿದರೂ, 2004ರಲ್ಲಿ 79 ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಕಾಂಗ್ರೆಸ್‌ -ಜೆಡಿಎಸ್‌ ಪಕ್ಷಗಳ ಮೈತ್ರಿಯಿಂದ ಬಿಜೆಪಿ ಅಧಿಕಾರದಿಂದ ವಂಚಿತ ಆಗುವಂತಾಯಿತು. ಆದರೆ, ಇಪ್ಪತ್ತೇ ತಿಂಗಳಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಯಡಿಯೂರಪ್ಪ ಅವರೊಂದಿಗೆ ಕೈ ಜೋಡಿಸಿದರು.ಆದರೆ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿಯಾಗಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಕುಮಾರಸ್ವಾಮಿ ಕೊಟ್ಟ ಮಾತಿನಂತೆ 20 ತಿಂಗಳ ನಂತರ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದೇ ಇದ್ದುದೇ ಯಡಿಯೂರಪ್ಪ ಅವರಿಗೆ ರಾಜಕೀಯ ಉತ್ತುಂಗಕ್ಕೇರಲು ಮೆಟ್ಟಿಲು ಹಾಕಿಕೊಟ್ಟಂತಾಯಿತು. ಅದುವರೆಗೂ ರೈತನಾಯಕನಾಗಿ ಗುರುತಿಸಿಕೊಂಡಿದ್ದ ಯಡಿಯೂರಪ್ಪ ವಚನ ಭ್ರಷ್ಟತೆಯ ಪ್ರಕರಣದ ನಂತರ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡರು. ಅವರಿಗರಿವಿಲ್ಲದೇ ಅವರು ಜಾತಿ ನಾಯಕ ಪಟ್ಟ ಕಟ್ಟಿಕೊಂಡರು.

ಹೋರಾಟವೇ ಬದುಕು :

ಯಡಿಯೂರಪ್ಪ ಅವರು ಬಿಜೆಪಿಯನ್ನು ತಳ ಮಟ್ಟದಿಂದ ಸಂಘಟಿಸಲು ರಾಜ್ಯಾದ್ಯಂತ ಸೈಕಲ್‌ ಸವಾರಿ ನಡೆಸಿದರು. ಬಿಜೆಪಿಗೆ ನಾಲ್ಕು ಸ್ಥಾನದಿಂದ 110ಕ್ಕೇರಿಸಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಬಿಜೆಪಿಯಂತಹ ಕಟ್ಟಾ ಹಿಂದುತ್ವವಾದಿ ಪಕ್ಷದಲ್ಲಿದ್ದರೂ, ರಾಜಕಾರಣದಲ್ಲಿ ರೈತ ನಾಯಕರಂತೆಯೇ ಬೆಳೆದರು. ಪ್ರತಿಪಕ್ಷದ ಸ್ಥಾನದಲ್ಲಿದ್ದಾಗಲೂ ನಿರಂತರ ರೈತರ ಪರ ಹೋರಾಟಗಳನ್ನು ನಡೆಸಿ, ಆಡಳಿತ ಪಕ್ಷಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಘೋಷ ವಾಕ್ಯ ಅವರ ಹೋರಾಟದ ಸಂದರ್ಭದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇತ್ತು.

 

credits to ಶಂಕರ ಪಾಗೋಜಿ


Spread the love

About Laxminews 24x7

Check Also

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಶ್ಯಾಮ್‌ಸುಂದರ್‌ ಗಾಯಕವಾಡ್

Spread the loveಬೆಂಗಳೂರು: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ’ ಎಂದು ಬಿಜೆಪಿ ರಾಜ್ಯ ಒಬಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ