Breaking News
Home / ರಾಜಕೀಯ / ಸಿ.ಎಂ ಆಗೋ ಆಸೆ ನಂಗೂ ಇದೆ: ಕಂದಾಯ ಸಚಿವ ಆರ್‌. ಅಶೋಕ

ಸಿ.ಎಂ ಆಗೋ ಆಸೆ ನಂಗೂ ಇದೆ: ಕಂದಾಯ ಸಚಿವ ಆರ್‌. ಅಶೋಕ

Spread the love

ದೇವನಹಳ್ಳಿ: ‘ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ. ನನಗೂ ಸಿ.ಎಂ ಆಗುವ ಆಸೆ ಇದೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಸದ್ಯಕ್ಕೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಇನ್ನೆರಡು ವರ್ಷ ಅವರೇ ಇರ್ತಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಹತ್ತಾರು ಮಂದಿ ಪರ್ಯಾಯ ನಾಯಕರಿದ್ದಾರೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಸಮಯ ಬಂದಾಗ ಅವರಿಗೆ ಅವಕಾಶ ಸಿಗುತ್ತದೆ. ಬಿಜೆಪಿ ತರಬೇತಿ ಸಂಸ್ಥೆ ಇದ್ದಂತೆ’ ಎಂದರು.

‘ಯಡಿಯೂರಪ್ಪ ಅವರ ಬದಲಾವಣೆಯ ಮಾತೇ ಇಲ್ಲ. ಅಂತಹ ಯಾವುದೇ ಚರ್ಚೆ ಪಕ್ಷದಲ್ಲಿ ನಡೆಯುತ್ತಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಕ್ಷಕ್ಕೆ ಶಕ್ತಿ ತುಂಬಲಿಕ್ಕೆ ಬರುತ್ತಿದ್ದಾರೆಯೇ ಹೊರತು ಯಾವುದೇ ಬದಲಾವಣೆ ಮಾಡಲು ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷದ ರಾಜ್ಯ ಉಸ್ತುವಾರಿ ರಾಜ್ಯಕ್ಕೆ ಬರುವುದು ಸುದ್ದಿಯಾಗುತ್ತದೆ. ಕಾಂಗ್ರೆಸ್ ಉಸ್ತುವಾರಿ ಬಂದಾಗ ಇಷ್ಟು ಸುದ್ದಿಯಾಗಲ್ಲ. ಅದು ಯಾಕೆ ಎಂಬುದು ನನಗೆ ಅರ್ಥವಾಗ್ತಿಲ್ಲ. ಕೊರೊನಾ ನಂತರ ರಾಜ್ಯದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎನ್ನುವ ಕುರಿತು ತಿಳಿದುಕೊಳ್ಳಲಿಕ್ಕಾಗಿ ಅವರು ಬರುತ್ತಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದರು.

ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಬರುತ್ತಿದ್ದಾರೆ ಎಂದು ಸುದ್ದಿಯಾಗ್ತಿದೆ ಅಷ್ಟೇ. ಇದು ಶುದ್ಧ ಸುಳ್ಳು. 10 ಶಾಸಕರು ಉಸ್ತುವಾರಿ ಜೊತೆ ಮಾತನಾಡಲು ಅನುಮತಿ ಕೇಳಿದ್ದಾರೆ. ಅವರು ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಲು ಕೇಳಿದ್ದು, ಪಕ್ಷದ ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳುತ್ತದೆ ಎಂದರು.

‘ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಧ್ಯೆ ಸಮಸ್ಯೆ ಇದೆ. ಅವರಿಬ್ಬರಲ್ಲೂ ಹೊಂದಾಣಿಕೆಯಿಲ್ಲ. ಅದನ್ನೆಲ್ಲಾ ಯಾರು ಕೇಳಲ್ಲ. ಪಕ್ಷ ಅಂದ ಮೇಲೆ ಒಂದು ಕುಟುಂಬವಿದ್ದಂತೆ .ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತದೆ. ಅದನೆಲ್ಲ ನಾವು ನಾಲ್ಕು ಗೋಡೆ ಮಧ್ಯೆ ಬಗೆಹರಿಸುತ್ತೇವೆ’ ಎಂದು ಹೇಳಿದರು.

ಎಂ.ಪಿ. ರೇಣುಕಾಚಾರ್ಯ ಶಾಸಕರ ಸಹಿ ಸಂಗ್ರಹ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ‘ಸಹಿ ಸಂಗ್ರಹಕ್ಕೆ ಪಕ್ಷದಲ್ಲಿ ಬೆಂಬಲ ನೀಡಲ್ಲ, ಮಾಡುವಂತಿಲ್ಲ. ಇದಕ್ಕೆ ನಮ್ಮ ವಿರೋಧವಿದೆ. ನಳೀನ್ ಕುಮಾರ್ ಕಟೀಲ್ ಕಠಿಣವಾಗಿ ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ಅದನ್ನು ಮೀರಿದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ’ ಎಂದರು.

ಕಾಂಗ್ರೆಸ್‌ನವರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ₹ 1 ಇದ್ದ ಪೆಟ್ರೋಲ್ ಅನ್ನು ₹ 80ವರೆಗೂ ತಂದವರು ಯಾರು, ₹ 20 ಏರಿಕೆಯಾದರೆ ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಅಲ್ಲೂ ಕೂಡ ಲಾಬಿಗಳಿವೆ. ಮುಂದಿನ 10 ವರ್ಷಗಳಲ್ಲಿ ಬ್ಯಾಟರಿ ಆಧಾರಿತ ವಾಹನಗಳು ಬರುತ್ತವೆ. ಆಗಲೂ ಬದಲಾವಣೆಗಳಾಗಲಿವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಯಾಗುವ ಸಂಭವವಿದೆ ಎಂದರು.

ಉಸ್ತುವಾರಿ ಬಿಟ್ಟುಕೊಡಲು ಸಿದ್ಧ: ‘ಸಚಿವ ಎಂ.ಟಿ.ಬಿ. ನಾಗರಾಜ್ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದವನು ನಾನು. ಅವರೊಂದಿಗೆ ಯಾವುದೇ ಮುನಿಸಿಲ್ಲ. ಅವರಿಗೆ ಕೋಲಾರ ಉಸ್ತುವಾರಿ ಕೊಟ್ಟಾಗ ನಾನೇ ಬೇಡ ಎಂದಿದ್ದೇನೆ. ಅವರಿಗೆ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡುವುದಕ್ಕೆ ನನ್ನ ಅಭ್ಯಂತರವಿಲ್ಲ. ನಾನು ಬಿಟ್ಟುಕೊಡಲಿಕ್ಕೆ ಸಿದ್ಧನಿದ್ದೇನೆ. ಅವರು ನಿರಂತರವಾಗಿ ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್​ ತೊರೆದು ಶಿಂಧೆ ಬಣ ಸೇರ್ಪಡೆಯಾದ ಬಾಲಿವುಡ್​ ನಟ ಗೋವಿಂದ; ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the loveಮುಂಬೈ: ಹಿರಿಯ ಬಾಲಿವುಡ್​ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್​ 28) ಕಾಂಗ್ರೆಸ್​ ತೊರೆದು ಶಿವಸೇನೆ (ಏಕನಾಥ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ