Breaking News
Home / ರಾಜ್ಯ / ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ನಿಂತುಹೋಗಿದೆ – KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ನಿಂತುಹೋಗಿದೆ – KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

Spread the love

ಬೆಂಗಳೂರು : ‘ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ಕೊಟ್ಟಿದೆ. ಇದಕ್ಕೆ ಸರ್ಕಾರದ ಯಾರು ಹೊಣೆಗಾರರು ಎಂದು ನೀವೇ ತೀರ್ಮಾನಿಸಿ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.

ಇನ್ನು ಮುಖ್ಯಮಂತ್ರಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಈಗ ಸುಮ್ಮನಾಗಿದ್ದಾರೆ. ಕೇಂದ್ರದಿಂದ ಎಷ್ಟು ಪ್ರಮಾಣದಲ್ಲಿ ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲವೇ? ಲಸಿಕೆ ವಿತರಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಯಾಕೆ ಸುಮ್ಮನಿದೆಯೋ ಗೊತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ? ಎಂದು ಪ್ರಶ್ನಿಸಿದರು.

ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರು. 18-44 ರ ವಯೋಮಾನದವರಿಗೆ ಲಸಿಕೆ ಅಂತಾ ಮೇ 1ರಂದು ಉದ್ಘಾಟನೆಯನ್ನೂ ಮಾಡಿದರು. ಇವತ್ತು ಲಸಿಕೆ ಕೊಡಲು ಆಗಲ್ಲ ಅಂತಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಬಹಳ ಚೆನ್ನಾಗಿ ಆಡಳಿತ ಮಾಡಲಿವೆ ಎಂದಿದ್ದರು. ಆದರೆ ಈ ಡಬಲ್ ಇಂಜಿನ್ ಗಳು ನಿಂತು ಹೋಗಿವೆ ಎಂದು ಕಿಡಿಕಾರಿದರು.

ಆಕ್ಸಿಜನ್ ಪೂರೈಸುವಂತೆ ಆದೇಶಿಸಿ ಹೈಕೋರ್ಟ್ ರಾಜ್ಯದ ಜನರಿಗೆ ನ್ಯಾಯ ಒದಗಿಸಿತ್ತು. ಆದರೆ ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿದೆ ಎಂದು ಇವರು ಶಹಬ್ಬಾಶ್ ಗಿರಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಯಾರಿಗಾದರೂ ಶಹಬ್ಬಾಶ್ ಗಿರಿ ಕೊಡಲಿ, ಒಟ್ಟಾರೆ ಜನರ ಪ್ರಾಣ ಉಳಿಸಿದರೆ ಸಾಕು. 45 ವರ್ಷ ಮೇಲ್ಪಟ್ಟವರಲ್ಲಿ ಅನೇಕರಿಗೆ ಇನ್ನು ಮೊದಲ ಲಸಿಕೆ ಕೊಟ್ಟಿಲ್ಲ. ಎರಡನೇ ಡೋಸ್ ಕೂಡ ಕೊಡಬೇಕು. ಈ ವಿಚಾರದಲ್ಲಿ ಸರ್ಕಾರದ ಬಳಿ ಪರಿಣಾಮಕಾರಿ ಯೋಜನೆ, ಸಿದ್ಧತೆ ಇಲ್ಲ. ಇದನ್ನು ನಿಭಾಯಿಸಲು ಇವರಿಗೆ ಆಗುತ್ತಿಲ್ಲ ಎಂದರು.

ಇನ್ನು ರೈತರ ಪರಿಸ್ಥಿತಿ ದೇವರಿಗೇ ಪ್ರೀತಿ. ರಸಗೊಬ್ಬರ ಬೆಲೆ ಕಡಿಮೆಯಾಗಲಿಲ್ಲ. ಲಾಕ್ ಡೌನ್ ಸಂತ್ರಸ್ತ ಪ್ರತಿ ಕುಟುಂಬಕ್ಕೆ 10 ಸಾವಿರ ರುಪಾಯಿ ನೆರವು ನೀಡಬೇಕು ಎಂಬುದು ನಮ್ಮ ಆಗ್ರಹ. ಗೊಬ್ಬರದ ಬೆಲೆ ಕಡಿಮೆ ಮಾಡಬೇಕು. ತರಕಾರಿ, ಹೂ ಬೆಳೆದು, ನಷ್ಟ ಆದವರಿಗೆ ಪರಿಹಾರ ಕೊಡಬೇಕು. ಸಾಂಪ್ರದಾಯಿಕ ವೃತ್ತಿ ಆಧರಿಸಿದವರಿಗೆ, ಜಿಮ್, ಸಿನಿಮಾ ತಂತ್ರಜ್ಞರಿಗೆ ನೆರವು ಸಿಗಬೇಕು. ನಿಮ್ಮಿಂದ ಇದನ್ನು ನಿಭಾಯಿಸಲು ಆಗುತ್ತಿಲ್ಲ. ಕೋವಿಡ್ ಪ್ರಕರಣದ ಸಂಖ್ಯೆ ಕಡಿಮೆ ಮಾಡಲು ಪರೀಕ್ಷೆ ನಡೆಸುವುದನ್ನೇ ಕಡಿಮೆ ಮಾಡಿದ್ದೀರಿ ಎಂದರು.

ಸರ್ಕಾರ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಬಡ್ಡಿ ಮನ್ನಾ ಮಾಡಬೇಕು, ಸಾಲದ ಕಂತು ಕಟ್ಟಲು ಕಾಲಾವಕಾಶ ನೀಡಬೇಕು. ಕೇಂದ್ರ ಸರ್ಕಾರವೇ ಲಸಿಕೆ ನೀಡಬೇಕು ಎಂದು ಕೇಳಬೇಕು. ರಾಜ್ಯದ ಹಣವನ್ನೇಕೆ ಇದಕ್ಕೆ ಬಳಸಬೇಕು? ಕೇಂದ್ರ ಸರಕಾರವೇ ಜವಾಬ್ದಾರಿ ಹೊರುವುದು ಜಗತ್ತಿನಾದ್ಯಂತ ಇರುವ ನೀತಿ. ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ಸೋಂಕು ಹೆಚ್ಚಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ಹೇಳಿದರು.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ