Breaking News
Home / ರಾಜ್ಯ / ಆಮ್ಲಜನಕ ದುರಂತ: ನಿರ್ಲಕ್ಷ್ಯ ವಹಿಸಿತೇ ಜಿಲ್ಲಾಡಳಿತ?

ಆಮ್ಲಜನಕ ದುರಂತ: ನಿರ್ಲಕ್ಷ್ಯ ವಹಿಸಿತೇ ಜಿಲ್ಲಾಡಳಿತ?

Spread the love

ಚಾಮರಾಜನಗರ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಪದೇ ಪದೇ ಆಮ್ಲಜನಕದ ಕೊರತೆ ಆಗುತ್ತಿದ್ದರೂ; ಅದರ ಬಗ್ಗೆ ಗಮನ ಹರಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದೇ ದುರಂತ ನಡೆಯಲು ಕಾರಣವಾಯಿತೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಆಮ್ಲಜನಕ ಕೊರತೆಯಾಗಿ ಕೊನೆ ಕ್ಷಣದಲ್ಲಿ ಮೈಸೂರಿನಿಂದ ಬಂದು ಅಥವಾ ಹತ್ತಿರದ ಆಸ್ಪತ್ರೆಗಳಿಂದ ತಂದು ವೈದ್ಯರು ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಿದ ಪ್ರಸಂಗಗಳು ಸಾಕಷ್ಟಿವೆ.

6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪನೆಯಾದ ಬಳಿಕ ಒಂದು ವಾರಕ್ಕೆ ಆಮ್ಲಜನಕ ಸಾಕಾಗುತ್ತದೆ. ಕೊರತೆ ಉಂಟಾಗುವುದಿಲ್ಲ. ಇದರ ಜೊತೆಗೆ ಸಿಲಿಂಡರ್‌ಗಳನ್ನು ತುಂಬಿ ತಂದಿಟ್ಟರೆ ಸುಲಭವಾಗಿ ನಿರ್ವಹಣೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ವೈದ್ಯರು, ಜಿಲ್ಲಾಡಳಿತ ‌, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು. ಆದರೆ, ಆಮ್ಲಜನಕದ ಅಗತ್ಯ ಹೆಚ್ಚಿದ್ದರಿಂದ ಒಂದೂವರೆ ದಿನಕ್ಕೆ ಆಮ್ಲಜನಕ ಮುಗಿಯುತ್ತಿದೆ. ಹಾಗಾಗಿ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಮುಂದುವರೆದಿದೆ.

ಭಾನುವಾರ ಬೆಳಿಗ್ಗೆ ಮರಿಯಾಲದಲ್ಲಿರುವ ಬಸವರಾಜೇಂದ್ರ ಆಸ್ಪತ್ರೆಗೆ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗದೆ ಇದ್ದುದರಿಂದ, ಆಮ್ಲಜನಕ ಸಹಿತ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು. ಖಾಸಗಿ ಆಸ್ಪತ್ರೆಯ ಆಡಳಿತ, ಆಮ್ಲಜನಕ ಪೂರೈಕೆಯಾಗದಿರುವ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಆರೋಪಿಸಿದ್ದರು.

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ವೈದ್ಯರು, ಅಧಿಕಾರಿಗಳ ಸಭೆ ನಡೆಸಿದ್ದರು. ರಾತ್ರಿ ಒಂಬತ್ತು ಗಂಟೆಗೆ ಆಮ್ಲಜನಕ ಸಿಲಿಂಡರ್‌ ಬರುತ್ತಿಲ್ಲ ಎಂದು ಗೊತ್ತಾದ ನಂತರವೇ ಅಧಿಕಾರಿಗಳು ಆಮ್ಲಜನಕ ತರಿಸಲು ಪ್ರಯತ್ನ ಆರಂಭಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಆದರೆ, ಜಿಲ್ಲಾಧಿಕಾರಿ ನೇರವಾಗಿ ಮೈಸೂರು ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಲಿಲ್ಲ ಎಂದು ಹೇಳಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ವೈದ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದರು. ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿದ್ದ ಧ್ರುವನಾರಾಯಣ, ಆಮ್ಲಜನಕ ಕೊರತೆ ಇರುವ ಬಗ್ಗೆ ಪ್ರಸ್ತಾಪಿಸಿದ್ದರು. ‘ಆ ಸಂದರ್ಭದಲ್ಲಿ ನಮ್ಮಲ್ಲಿ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದ್ದರು’ ಎಂದು ಧ್ರುವನಾರಾಯಣ ಮಾಧ್ಯಮಗಳಿಗೆ ತಿಳಿಸಿದರು.

ನಡೆದಿದ್ದೇನು?: ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪತ್ನಿಯನ್ನು ದಾಖಲಿಸಿದ್ದ ರಾಜೇಂದ್ರಬಾಬು ಎಸ್‌. ಎಂಬುವವರಿಗೆ ರಾತ್ರಿ 8.30ರ ವೇಳೆಗೆ ಆಮ್ಲಜನಕ ಖಾಲಿಯಾಗಿದೆ ಎಂಬ ಮಾಹಿತಿ ಸಿಕ್ಕಿತು.

‘ಕೋವಿಡ್‌ ಆಸ್ಪತ್ರೆಯ ಎದುರುಗಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದೆ. ಅದು ಸಾಧ್ಯವಾಗಲಿಲ್ಲ. ನಂತರ ಮಾಧ್ಯಮ ಪ್ರತಿನಿಧಿಯೊಬ್ಬರ ಗಮನಕ್ಕೆ ತಂದೆ. ಅವರು ಬೇರೆ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿ, ಮೈಸೂರು ಸಂಸದ ಸೇರಿದಂತೆ ಬೇರೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಕನಿಷ್ಠ 50 ಸಿಲಿಂಡರ್‌ ಪೂರೈಕೆಯಾಗುವಂತೆ ನೋಡಿಕೊಂಡರು. ಇಂತಹ ಪ್ರಕರಣ ಮುಂದೆದೂ ಮರುಕಳಿಸಬಾರದು. ಸರ್ಕಾರ ತಕ್ಷಣ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಸುರೇಶ್‌ ಕುಮಾರ್‌, ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಸೋಮವಾರ ಘಟನೆ ಗೊತ್ತಾಗುತ್ತಿದ್ದಂತೆಯೇ, ಸಾರ್ವಜನಿಕರು, ಸಾಮಾಜಿಕ ಜಾಲತಾಣಗಳ ಬಳಕೆದಾರರು, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ವಾರದ ಹೆಚ್ಚು ದಿನ ಜಿಲ್ಲೆಯಲ್ಲೇ ಇದ್ದು, ಎಲ್ಲ ವ್ಯವಸ್ಥೆ ಮಾಡಬೇಕಿತ್ತು ಎಂದು ಕಾಂಗ್ರೆಸ್‌ ಮುಖಂಡ ಎ.ಆರ್‌.ಕೃಷ್ಣಮೂರ್ತಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಎದುರು ಪ್ರತಿಭಟನೆಯನ್ನೂ ನಡೆಸಿದರು. ಜಿಲ್ಲಾಡಳಿತ ಭವನದಲ್ಲಿ ಮನವಿ ಸ್ವೀಕರಿಸಲು ನಿರಾಕರಿಸಿದ ಸುರೇಶ್ ಕುಮಾರ್‌ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಘೋಷಣೆ ಕೂಗಿದರು.

‘ಅಧಿಕಾರದಲ್ಲಿರಲು ಅನರ್ಹರು’

ಘಟನೆ ಖಂಡಿಸಿ ಜಿಲ್ಲಾ ಆಸ್ಪತ್ರೆ ಮುಂಭಾಗ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಅಬ್ರಾರ್ ಆಹಮದ್, ‘ಈ ಕರಾಳ ಘಟನೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯತೆ ಮತ್ತು ರಾಜ್ಯ ಸರ್ಕಾರದ ದುರಾಡಳಿತವೇ ಕಾರಣ. ಪಕ್ಕದ ಜಿಲ್ಲೆ ಮೈಸೂರಿನಿಂದ ಆಮ್ಲಜನಕ ತರಲು ವಿಫಲ ಆಗಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ. ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ರಾಜೀನಾಮೆ ನೀಡಿ ಶಾಶ್ವತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು’ ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ