ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ʻಜೈ ಹೋ. ಜೈ ಹೋ.ʼ, ʻಬೊಂಬೆ ಹೇಳುತೈತೆ. ಮತ್ತೆ ಹೇಳುತೈತೆ.. ನೀನೆ ರಾಜಕುಮಾರʼ ಹಾಡುಗಳು ಮಾರ್ದನಿಸಿದವು. ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ತಮ್ಮ ಕಂಚಿನ ಕಂಠದಿಂದ ಸುಮಧುರ ಗಾಯನಗಳೊಂದಿಗೆ ಸಂತ ಫಿಲೋಮಿನಾ ಕಾಲೇಜಿನ ಯುವ ಮನಸ್ಸುಗಳನ್ನು ಸಂಗೀತ ಅಲೆಯಲ್ಲಿ ತೇಲಿಸಿದರು.
ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎಡಿನ್ ಕ್ರಿಕೆಟ್ ಪಂದ್ಯಾವಳಿಗಾಗಿ ರೂಪಿಸಿರುವ ವೇದಿಕೆಯು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಯಿತು. ಕ್ರೀಡೆ ಮತ್ತು ಸಂಗೀತ ಭಿನ್ನ ಕ್ಷೇತ್ರಗಳಾದರೂ, ಅವುಗಳ ಆಶಯ ಒಂದೆ. ಅದು ಪ್ರೇಕ್ಷಕರನ್ನು ರಂಜಿಸುವುದು, ಮುದ ನೀಡಿವುದು. ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲು ಆಗಮಿಸಿದ್ದ ವಿಜಯ ಪ್ರಕಾಶ್ ಅವರು ಕ್ರಿಕೆಟ್ ಮತ್ತು ಸಂಗೀತದ ಆಶಯವನ್ನು ಒಟ್ಟಾಗಿಸಿ ಕಾಲೇಜಿನ ಯುವಜನತೆಗೆ ರಸದೌತಣ ನೀಡಿದರು.
ಹಾಡುಗಳ ಮೂಲಕ ಕೇಳುಗರ ಕಿವಿ, ಮನಸ್ಸಿಗೆ ಇಂಪೆರೆದರು. ಅಲ್ಲದೆ, ತಾನು ಕ್ರೀಡೆಗೇನು ಕಮ್ಮಿ ಇಲ್ಲ ಎನ್ನುವಂತೆ ಬ್ಯಾಟ್ ಹಿಡಿದು ಬಾಲ್‌ಗಳನ್ನು ಬೌಂಡರಿಗೆ ಅಟ್ಟುವ ಮೂಲಕ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದರು.
ಇದೇ ವೇಳೆ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ʻನಾವು ನೆರಳಿನಲ್ಲಿ ಕುಳಿತು ಹಾಡುಗಳನ್ನು ಹಾಡುತ್ತೇವೆ. ಕ್ರೀಡಾಪಟುಗಳು ಬಿಸಿಲಿನಲ್ಲಿ ನಿಂತು ಕ್ರಿಕೆಟ್ ಆಡುತ್ತಾರೆ. ಆದರೆ, ಪ್ರೇಕ್ಷಕರನ್ನು ರಂಜಿಸುವ, ಮುದ ನೀಡುವ ಇಬ್ಬರ ಆಶಯವೂ ಒಂದೇ ಆಗಿದೆʼ ಎಂದು ಅಭಿಪ್ರಾಯಪಟ್ಟರು.
Laxmi News 24×7