Home / ರಾಜ್ಯ / ಸಾರಿಗೆ ನೌಕರರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ

ಸಾರಿಗೆ ನೌಕರರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ

Spread the love

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಕಳೆದ ಆರು ದಿನಗಳಿಂದ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರಿಗೆ ಸಿಬ್ಬಂದಿ ಕುಟುಂಬ ಸಮೇತರಾಗಿ ರಸ್ತೆಗಿಳಿದು ತಟ್ಟೆ ಹಾಗೂ ಲೋಟ ಬಡಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು ರಸ್ತೆ ಮಧ್ಯೆ ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಸುಮಾರು 300 ಕ್ಕೂ ಅಧಿಕ ಮಂದಿ ನಗರದ ಆಜಾದ್ ಪಾರ್ಕ್‍ನಲ್ಲಿ ಜಮಾಯಿಸಿ ಸರ್ಕಾರ ಹಾಗೂ ಸಾರಿಗೆ ಸಚಿವರ ವಿರುದ್ಧ ಕಿಡಿ ಕಾರಿದರು. ನಿಮ್ಮಿಂದ ಇಂದು ನಾವು ಬೀದಿಗೆ ಬಂದಿದ್ದೇವೆ. ಮಾರ್ಚ್ ತಿಂಗಳ ಸಂಬಳ ನೀಡಿಲ್ಲ. ತಿನ್ನೋಕೆ ಅನ್ನ ಇಲ್ಲ. ನಾವು ಇಂದು ಇಲ್ಲಿ ಕೂತಿದ್ದೇವೆ ಅಂದರೆ ಅದಕ್ಕೆ ನೀವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸದೆ ನೌಕರರ ಹೋರಾಟವನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ನಾವು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನೀವೇ ಕೊಟ್ಟಂತ ಮಾತನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೀರಾ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ಮಾರ್ಗದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ಸಾರಿಗೆ ನೌಕರರ ಕುಟುಂಬಸ್ಥರು, ತಟ್ಟೆ ಲೋಟ ಬಡಿಯುವ ಚಳುವಳು ನಡೆಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರರು ತಂದೆ ತಾಯಿ, ಪತ್ನಿ , ಅಣ್ಣ, ತಮ್ಮ, ಮಕ್ಕಳು ಎಲ್ಲರೂ ಭಾಗಿಯಾಗಿದ್ದರು. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸಬೇಕು ಅಂತ ಆಗ್ರಹಿಸಿದರು.

ಬಾಗಲಕೋಟೆ: ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗ ವರದಿ ಜಾರಿಯಾಗಬೇಕೆಂದು ಬರೆದ ಫಲಕ ಹಿಡಿದು ಫಲಕ ಹಿಡಿದು ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಈ ವೇಳೆ ಸಾರಿಗೆ ನೌಕರರ ಪ್ರತಿಭಟನೆ ರೈತ ಸಂಘಟನೆಗಳು ಸಾಥ್ ನೀಡಿದವು.

ವಿಜಯಪುರ: ವಿಜಯಪುರದ ಸೆಟಲೈಟ್ ಬಸ್ ನಿಲ್ದಾಣದ ಕ್ವಾಟ್ರಸ್ ನ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆ ಮಾರ್ಚ್ ತಿಂಗಳ ಸಂಬಳ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಸಾರಿಗೆ ನೌಕರರ ಪತ್ನಿಯರು ತಮಟೆ ಮತ್ತು ಗಂಟೆ ಬಾರಿಸುವ ಹೋರಾಟಕ್ಕೆ ಬಳ್ಳಾರಿ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ, ಬೀದಿಯಲ್ಲಿ ನಿಂತು ರಸ್ತೆ ಮಧ್ಯೆ ಬಸ್ ತಡೆದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಢೀರನೆ ನಡೆದ ಪ್ರತಿಭಟನೆಯಿಂದ ಕೆಲ ಕಾಲ ಗೊಂದಲ ಮತ್ತು ಗಲಾಟೆ ವಾತಾವರಣ ಸೃಷ್ಟಿಯಾಯಿತು, ದಾರಿಯಲ್ಲಿ ಬಂದ ಸಾರಿಗೆ ಬಸ್ ತಡೆದು ಬಸ್ ಚಾಲಕನನ್ನು ತರಾಟೆ ತೆಗೆದುಕೊಂಡು ಕುಟುಂಬಸ್ಥರು ಬಸ್ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ.

ಚಾಮರಾಜನಗರ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಸಾರಿಗೆ ನೌಕರರು ಕುಟುಂಬಸ್ಥರೊಟ್ಟಿಗೆ ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಾರಿಗೆ ನೌಕರರಿಗೆ ರೈತ ಸಂಘದ ಕಾರ್ಯಕರ್ತರು ಭಾಗಿಯಾಗಿ ಬೆಂಬಲ ನೀಡಿದರು.

ಚಿತ್ರದುರ್ಗ: ಜಿಲ್ಲೆಯ ಓಬವ್ವ ವೃತ್ತದಿಂದ ಡಿಸಿ ಕಚೇರಿವರೆಗೆ ಸಾರಿಗೆ ನೌಕರರು ಕುಟುಂಬಸ್ಥರೊಂದಿಗೆ ಸಿಎಂ ಬಿಎಸ್ ವೈ, ಸಾರಿಗೆ ಸಚಿವ ಸವದಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು ಹಾಗೂ ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿದ್ದರು.

ದಾವಣಗೆರೆ: ಯುಗಾದಿ ಹಬ್ಬವನ್ನು ಮರೆತು ಇಂದು ಸಾರಿಗೆ ನೌಕರರು ಕುಟುಂಬಸ್ಥರ ಸಮೇತ ಪ್ರತಿಭಟನೆ ನಡೆಸಿದರು. ಯಡಿಯೂರಪ್ಪನವರು ಒಂದೇ ದಿನ ಬಂದು ಬಸ್ ಓಡಿಸಲಿ, ಎಸಿ ಕಾರಿನಲ್ಲಿ ಡ್ರೈವರ್‍ನನ್ನು ಇಟ್ಟುಕೊಂಡು ಹೋಗುವುದಲ್ಲ. ನಮ್ಮ ಗಂಡಂದಿರ ತರ ಗಾಡಿ ಓಡಿಸಲಿ ಗೊತ್ತಾಗುತ್ತೆ. ಹಬ್ಬ ಇದೆ ಮಕ್ಕಳಿಗೆ ಬಟ್ಟೆ ಇಲ್ಲ, ಮನೆಯಲ್ಲಿ ರೇಷನ್ ಇಲ್ಲ ಹೇಗೆ ಹಬ್ಬ ಮಾಡುವುದು. ಕೂಡಲೇ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ. ಬೇಡಿಕೆ ಈಡೇರಿದರೆ ಆಗ ನಮಗೆ ನಿಜವಾದ ಯುಗಾದಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಸಿರು.

ಧಾರವಾಡ: ಸಾರಿಗೆ ಮಹಿಳಾ ಸಿಬ್ಬಂದಿ ಮತ್ತು ಅವರ ಮಕ್ಕಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಿದರು.

ಬಾಗಲಕೋಟೆ: ಕಲಬುರಗಿ ನಗರದ ಮೂರು ಡಿಪೋ ಮುಂದೆ ಕುಳಿತು ಮಹಿಳೆಯರು ಬೇಡಿಕೆ ಈಡೇರಿಸುವವರೆಗೆ ನಮ್ಮ ಮನೆಯವರನ್ನು ಕೆಲಸಕ್ಕೆ ಕಳಿಸೋದಿಲ್ಲಾ ಅಂತ ಧರಣಿ ನಡೆಸಿದರು.

ಹಾಸನ: ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ತಟ್ಟೆ, ಲೋಟ ಹಿಡಿದು ಹಾಸನದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಈ ವೇಳೆ ಕರ್ತವ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ ಬಸ್‍ನಿಂದ ಕೆಳಗಿಳಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಮತ್ತೊಂದೆಡೆ ಸಾರಿಗೆ ನೌಕರ ಪಾಲಾಕ್ಷ ಎಂಬವರು ಹಾಸನದ ಸಿಟಿ ಬಸ್‍ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ಹಾವೇರಿಯಲ್ಲಿ ತಟ್ಟೆ ಮತ್ತು ಲೋಟ ಬಾರಿಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ರಾಜ್ಯ ರೈತ ಸಂಘ, ಎಸ್‍ಎಫ್‍ಐ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಸಾಥ್ ನೀಡಿದರು.

ಕೋಲಾರ: ಸಾರಿಗೆ ನೌಕರರ ಮುಷ್ಕರವನ್ನ ಬೆಂಬಲಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ತಟ್ಟೆ ಲೋಟ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ತಟ್ಟೆ ಲೋಟ ಹಿಡಿದು ಪ್ರತಿಭಟನೆ ನಡೆಸಿದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸರ್ಕಾರದ ವಿರುದ್ದ ದಿಕ್ಕಾರಗಳನ್ನ ಕೂಗಿದ್ರು. ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸದೆ, ಸರ್ಕಾರ ನೌಕರರ ವಿರುದ್ದ ತೆಗೆದುಕೊಳ್ಳುತ್ತಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬೇಡಿಕೆಗಳನ್ನ ಈಡೇರಿಸುವುದನ್ನ ಬಿಟ್ಟು, ಅವರ ಮೇಲೆ ಎಸ್ಮಾ ಜಾರಿ ಮಾಡುವುದು ಹಾಗೂ ವರ್ಗಾವಣೆ ಮಾಡುತ್ತಿರುವುದು ಖಂಡನೀಯ ಎಂದರು. ಅಲ್ಲದೆ ತರಬೇತಿಯಲ್ಲಿರುವ ಸಾರಿಗೆ ನೌಕರರನ್ನ ಕೆಲಸದಿಂದ ವಜಾ ಮಾಡಿತ್ತೇವೆಂದು ಬೆದರಿಕೆ ಹಾಕಿ ನೋಟೀಸ್ ನೀಡುತ್ತಿರುವ ಸರ್ಕಾರದ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿದರು.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಅಂಕೋಲ ತಾಲೂಕು ಸೇರಿ ವಿವಿಧ ತಾಲೂಕಿನಲ್ಲಿ ಸಾರಿಗೆ ನೌಕರರ ಕುಟುಂಬಸ್ಥರ ಜೊತೆ ಪ್ರತಿಭಟನೆಗೆ ನಡೆಸಿದರು.

ಮಂಡ್ಯ: ನಮ್ಮ ಕುಟುಂಬದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಹೋರಾಟ ಹತ್ತಿಕ್ಕಲು ಧಮನಕಾರಿ ನೀತಿ ಅನುಸರಿಸಲಾಗುತ್ತಿದೆ ಎಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಾರಿಗೆ ನೌಕರರ ಜೊತೆ ಕುಟುಂಸ್ಥರು ಪ್ರತಿಭಟನೆ ನಡೆಸಿದರು.

ಮೈಸೂರು: ಜಿಲ್ಲೆಯ ಗಾಂಧಿ ವೃತ್ತದಲ್ಲಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನಾವು ನಮ್ಮ ಮನೆಗಳನ್ನು ಖಾಲಿ ಮಾಡುವುದಿಲ್ಲ ಎಂದು ಸಾರಿಗೆ ನೌಕರರ ಕುಟುಂಬಸ್ಥರು ಧರಣಿ ನಡೆಸಿದರು.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಾರಿಗೆ ನೌಕರರ ಜೊತೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರರ ಕುಟುಂಬಸ್ಥರಿಗೆ ರೈತ ಸಂಘದ ಕಾರ್ಯಕರ್ತರ ಸಾಥ್ ನೀಡಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ