Home / Uncategorized / ಹೆವಿ ಬ್ಯಾಡ್ಜ್ ಡಿಎಲ್ ರಿನಿವಲ್​ಗೆ ಹರಸಾಹಸ: ಸಾರಿಗೆ ಇಲಾಖೆ ಹೊಸ ನಿಯಮದಿಂದ ಚಾಲಕರಿಗೆ ಸಂಕಷ್ಟ

ಹೆವಿ ಬ್ಯಾಡ್ಜ್ ಡಿಎಲ್ ರಿನಿವಲ್​ಗೆ ಹರಸಾಹಸ: ಸಾರಿಗೆ ಇಲಾಖೆ ಹೊಸ ನಿಯಮದಿಂದ ಚಾಲಕರಿಗೆ ಸಂಕಷ್ಟ

Spread the love

ಕರೊನಾ ನಂತರ ವಾಹನ ಚಾಲಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಒಂದು ಕಡೆ ಕೆಲಸ ಇಲ್ಲ, ಮತ್ತೊಂದೆಡೆ ಬದುಕಿನ ಬವಣೆ. ಈ ನಡುವೆ ಡ್ರೖೆವಿಂಗ್ ಲೈಸೆನ್ಸ್ ಪರವಾನಗಿ ನವೀಕರಿಸಲು ದೂರದ ಬೆಂಗಳೂರು ಇಲ್ಲವೇ ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಚಾಲಕರು ಈ ಹಿಂದೆ ಆಯಾ ಜಿಲ್ಲೆ ಇಲ್ಲವೇ ವಿಭಾಗೀಯ ಕೇಂದ್ರದಲ್ಲಿರುವ ಸಾರಿಗೆ ಇಲಾಖೆ ಕಚೇರಿಯಲ್ಲಿ ಚಾಲನಾ ಪರವಾನಗಿ ನವೀಕರಣ ಮಾಡಿಕೊಡಲಾಗುತ್ತಿತ್ತು. ಆದರೆ ಈಗ ಸಾರಿಗೆ ಇಲಾಖೆಯ ಹೊಸ ನಿಯಮದಿಂದ ರಾಜಧಾನಿ ಬೆಂಗಳೂರು ಇಲ್ಲವೆ ಧಾರವಾಡದ ಸಾರಿಗೆ ಕಚೇರಿಗೆ ಹೋಗಿ ತರಬೇತಿ ಪಡೆದು ಪ್ರಮಾಣಪತ್ರ ಪಡೆದುಕೊಂಡ ಮೇಲೆಯೇ ಪರವಾನಗಿ ನವೀಕರಣ ಮಾಡಿಕೊಳ್ಳಬೇಕಾಗಿದೆ.

ಚಾಲಕರು ಬಹುತೇಕ ಬಡವರು ಇಲ್ಲವೇ ಮಧ್ಯಮ ವರ್ಗಕ್ಕೆ ಸೇರಿರುತ್ತಾರೆ. ಕರೊನಾ ಸಮಸ್ಯೆ ಕಂಡುಬಂದ ನಂತರ ಕೆಲಸವೂ ಸರಿಯಾಗಿ ಸಿಗುತ್ತಿಲ್ಲ. ಸಿಕ್ಕರೂ ನಿರ್ವಹಣೆ ಕಷ್ಟ ಎಂಬಂತಾಗಿದೆ. ಕೆಲಸ ಸರಿಯಾಗಿ ಸಿಗದೆ ಸಂಬಳಕ್ಕೂ ಪರದಾಡುವ ಸಂದಿಗ್ಧತೆಗೆ ಸಿಲುಕಿದ್ದಾರೆ. ಈ ನಡುವೆ ದೂರದ ಬೆಂಗಳೂರಿಗೆ ಹೋಗಿ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೆಂಗಳೂರಿಗೆ ಇಲ್ಲವೇ ಧಾರವಾಡಕ್ಕೆ ಹೋಗಿ ತರಬೇತಿಯಲ್ಲಿ ಪಾಲ್ಗೊಂಡು ಪ್ರಮಾಣಪತ್ರ ಪಡೆದು ಬರಲು ಕನಿಷ್ಠ ಮೂರು ದಿನ ಬೇಕು. ಅಲ್ಲಿಯವರೆಗಿನ ಪ್ರಯಾಣ, ಊಟ, ವಸತಿ ವೆಚ್ಚ ಭರಿಸೋದು ಯಾರು? ಅಲ್ಲದೆ ತರಬೇತಿಗೂ ಶುಲ್ಕ ಪಾವತಿಸಬೇಕು. ಅಲ್ಲಿಂದ ಪ್ರಮಾಣಪತ್ರ ತಂದು ಅದನ್ನು ಸ್ಥಳೀಯ ಆರ್​ಟಿಒ ಕಚೇರಿಗೆ ಸಲ್ಲಿಸಬೇಕು. ಇದಕ್ಕೆಲ್ಲ ಒಂದು ವಾರ ಸಮಯ ಹಿಡಿಯುತ್ತದೆ. ಒಂದು ವಾರದ ಸಂಬಳ ಯಾರು ಕೊಡುತ್ತಾರೆ ಎನ್ನುವುದು ಚಾಲಕರ ಅಳಲು.

ಎಲ್ಲಿ ತರಬೇತಿ?
ಭಾರಿ ವಾಹನ ಚಾಲಕರ ಚಾಲನಾ ಪರವಾನಗಿ ನವೀಕರಿಸುವ ಮುನ್ನ ರಾಜ್ಯದ ಎರಡು ಕಡೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಆಯೋಜಿಸಿದ್ದು ಇಲ್ಲಿ ತರಬೇತಿ ಪಡೆದು ಪ್ರಮಾಣಪತ್ರ ಸ್ವೀಕರಿಸಿದ ಬಳಿಕವೇ ಪರವಾನಗಿ ನವೀಕರಿಸುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಸಿಂಗನಾಯಕನಹಳ್ಳಿಯ ಭಾರಿ ವಾಹನ ಚಾಲಕರ ತರಬೇತಿ ಶಾಲೆ ಮತ್ತು ಮತ್ತು ಧಾರವಾಡ ಗಾಮನಗಟ್ಟಿಯ ಭಾರಿ ವಾಹನ ಚಾಲಕರ ತರಬೇತಿ ಶಾಲೆಯಲ್ಲಿ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ನವೀಕರಣದ ಅಗತ್ಯವಿರುವ ಚಾಲಕರು ಒಂದು ದಿನದ ತರಬೇತಿ ಪಡೆಯುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದೆ.

ಕೆಲಸವಿಲ್ಲದೆ ಪರದಾಡುವ ಹೊತ್ತಿನಲ್ಲಿ ಸಾರಿಗೆ ಇಲಾಖೆಯ ಹೊಸ ನಿಯಮ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಬೆಂಗಳೂರಿಗೆ ಬಂದು ಎರಡು ದಿನ ಆಗಿದೆ. ಜೇಬಲ್ಲಿ ಹಣ ಬೇರೆ ಇಲ್ಲ. ಪ್ರಯಾಣ ದರವೇ ದುಬಾರಿ. ಇನ್ನು ಬೆಂಗಳೂರಿನಲ್ಲಿದ್ದು ತರಬೇತಿ ಪಡೆದು ಬರಬೇಕು. ಏನಿಲ್ಲವೆಂದರೂ 7ರಿಂದ 8 ಸಾವಿರ ರೂ. ವೆಚ್ಚವಾಗುತ್ತದೆ. ನಮ್ಮ ಕಷ್ಟ ಕೇಳೋರೇ ಇಲ್ಲ.

|ಸುನೀಲ್ ಶೆಟ್ಟಿ ಲಾರಿ ಚಾಲಕ

ಆಯಾ ಜಿಲ್ಲಾ ಕೇಂದ್ರದ ಆರ್​ಟಿಒ ಕಚೇರಿ ವ್ಯಾಪ್ತಿಯಲ್ಲೇ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಿ. ಚಾಲಕರ ಬದುಕು ಸಂಕಷ್ಟದಲ್ಲಿದೆ. ಈ ನಡುವೆ ದುಬಾರಿ ವೆಚ್ಚ ಮಾಡಿ ತರಬೇತಿ ಪಡೆದು ನವೀಕರಣ ಮಾಡಿಕೊಳ್ಳುವ ಸ್ಥಿತಿಯಲ್ಲಿ ಚಾಲಕರಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು.
|ಶಶಿಧರ್ ದಿ ಇಂಡಿಯನ್ ಡ್ರೖೆವಿಂಗ್ ಸ್ಕೂಲ್ ತೀರ್ಥಹಳ್ಳಿ

ಹೆವಿ ಬ್ಯಾಡ್ಜ್ ಪರವಾನಗಿ ನವೀಕರಣದ ಸಲುವಾಗಿ ತರಬೇತಿ ಪಡೆಯಲು ರಾಜ್ಯದ ಎರಡು ಕಡೆ ಅವಕಾಶ ನೀಡಲಾಗಿದೆ. ಇದರಿಂದ ಹೊರ ಜಿಲ್ಲೆಗಳ ಚಾಲಕರಿಗೆ ಸಮಸ್ಯೆಯಾಗಿದ್ದು ಇದನ್ನು ಬದಲಾಯಿಸುವಂತೆ ಮನವಿಗಳು ಬಂದಿವೆ. ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

|ಕೆ.ಆರ್.ಶಶಿಕಲಾ ಸಾಗರ ಆರ್​ಟಿಒ


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ