Breaking News
Home / ರಾಜ್ಯ / ಸಾಲಬಾಧೆಯಿಂದ ಶಿಕ್ಷಣ ಸಂಸ್ಥೆ ಮಾಲೀಕ ಆತ್ಮಹತ್ಯೆ; ಪ್ರತಿಭಟನೆಗೆ ಬಂದ ಮತ್ತೋರ್ವ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ

ಸಾಲಬಾಧೆಯಿಂದ ಶಿಕ್ಷಣ ಸಂಸ್ಥೆ ಮಾಲೀಕ ಆತ್ಮಹತ್ಯೆ; ಪ್ರತಿಭಟನೆಗೆ ಬಂದ ಮತ್ತೋರ್ವ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ

Spread the love

ಕಲಬುರ್ಗಿ: ಕೊರೋನಾದಿಂದಾಗಿ ಜನಸಾಮಾನ್ಯರ ಬದುಕೇ ದುರ್ಭರ ಎನ್ನುವಂತಾಗಿದೆ. ಅದರಲ್ಲಿಯೂ ಖಾಸಗಿ ಶಾಲೆಗಳ ಪರಿಸ್ಥಿತಿ ಅಧೋಗತಿಗೆ ತಳ್ಳಲ್ಪಟ್ಟಿದೆ. ಕೊರೋನಾ ಕಾರಣದಿಂದಾಗಿ ಕೆಲ ತರಗತಿಗಳ ಆರಂಭಕ್ಕೆ ಮಾತ್ರ ಅನುಮತಿ ಸಿಕ್ಕಿದೆ. ಆದರೆ ಎಲ್.ಕೆ.ಜಿ., ಯುಕೆಜಿ, ಒಂದನೇ ತರಗತಿಯಿಂದ ತರಗತಿಗಳು ಆರಂಭಗೊಂಡಿಲ್ಲ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಸಾಲಬಾಧೆ ತಾಳಲಾರದೆ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸರ್ಕಾರದ ಧೋರಣೆಗಳೇ ಕಾರಣ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಲು ಬಂದ ವೇಳೆಯಲ್ಲಿ ಮತ್ತೋರ್ವ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ.

ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿ, ಸಾಲಬಾಧೆ ತಾಳದೆ ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಂಕರ್ ಬಿರಾದಾರ(48) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಣ ಸಂಸ್ಥೆ ಮಾಲೀಕ. ಶಂಕರ್ ಬಿರಾದಾರ ಕಲಬುರ್ಗಿಯ ವಿವೇಕಾನಂದ ನಗರ ನಿವಾಸಿ. ಸೇಡಂ, ಚಿತ್ತಾಪುರ ಮತ್ತಿತರ ಕಡೆ ಶಿಕ್ಷಣ ಸಂಸ್ಥೆ ಹೊಂದಿದ್ದ ಬಿರಾದಾರ, ಶಿಕ್ಷಣ ಸಂಸ್ಥೆಗಾಗಿ ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ ನೋಟ್​ನಲ್ಲಿ ಬಿರಾದಾರ ಬರೆದಿದ್ದಾರೆ. ತನ್ನ ಕುಟುಂಬದ ಸದಸ್ಯರೆಲ್ಲರೂ ಒಳ್ಳೆಯವರು. ನನ್ನ ಸಾವಿಗೂ ಅವರಿಗೂ ಸಂಬಂಧವಿಲ್ಲ ಎಂದು ಬಿರಾದಾರ ಪತ್ರದಲ್ಲಿ ಬರೆದಿದ್ದಾರೆ. ರಿಂಗ್ ರಸ್ತೆಯ ಮರಗಮ್ಮ ದೇವಸ್ಥಾನದ ಬಳಿ ವಿಷ ಸೇವನೆ ಮಾಡಿದ್ದ ಬೀರಾದರ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಂಕರ್ ಬಿರಾದಾರ ಆತ್ಮಹತ್ಯೆ ಖಂಡಿಸಿ ಹಾಗೂ ಆತ್ಮಹತ್ಯೆಗೆ ಕಾರಣರಾದ ಸಾಲಗಾರರ ಮೇಲೆ ಕ್ರಮಕ್ಕೆ ಆಗ್ರಹಿಸಿ ಇಂದು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೋವಿಡ್ ಕಾರಣದಿಂದಾಗಿ ಯಾವುದೇ ಶಾಲೆಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಿರುವಾಗ ಶಿಕ್ಷಣ ಸಂಸ್ಥೆ ಕಟ್ಟಲು, ಶಿಕ್ಷಕರಿಗೆ ವೇತನ ನೀಡಲು ಸಾಲ ಮಾಡುವಂತಾಗಿದೆ. ಸಾಲಗಾರರ ಕಾಟ ತಾಳದೆ ಶಂಕರ್ ಬಿರಾದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಬಿರಾದಾರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಸಾಲ ಮರುಪಾವತಿಗೆ ಕಾಲಾವಾಕಾಶ ಕಲ್ಪಿಸಬೇಕು. ಪ್ರಸಕ್ತ ಸಾಲಿನ ಆರ್.ಟಿ.ಇ. ಹಣವನ್ನು ಬೇಗನೆ ಬಿಡುಗಡೆ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲು ಆಗ್ರಹಿದರು.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ