ಬೆಳಗಾವಿ: ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ವಿಧಾನಸಭೆಯಲ್ಲಿಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ ಅರ್ಧ ದಿನದ ಕಲಾಪವನ್ನೇ ನುಂಗಿ ಹಾಕಿತು. ಕೊನೆಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ ಕೇಳುವಂತೆ ಬಿಜೆಪಿ ಮಾಡಿದ್ದಲ್ಲದೇ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವೆ ಹೆಬ್ಬಾಳ್ಕರ್ ಒಪ್ಪಿಕೊಂಡರು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ನಾಯಕ ಆರ್.ಅಶೋಕ್, ಮೂರು ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಪತ್ತೆ ಆಗಿದ್ದಾರೆ. ಇಂದು ಮೊದಲು ಸಚಿವರನ್ನು ಕರೆಸಿ ಉತ್ತರ ಕೊಡಿಸಿ, ನಂತರ ಕಲಾಪ ನಡೆಸಿ. ಎರಡು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ಪಕ್ಷದ ಕೆಲಸಗಳಿಗೆ ಹೋಯ್ತಾ? ಸಚಿವರು ಉತ್ತರ ಕೊಡದಿದ್ದರೆ ಧರಣಿ ಮಾಡುತ್ತೇವೆ ಎಂದರು.
ಸ್ವೀಕರ್ ಸಮಾಧಾನಕ್ಕೆ ಮಣಿಯದ ವಿಪಕ್ಷಗಳು: ಈ ವೇಳೆ ಸ್ಪೀಕರ್ ಖಾದರ್, ಪ್ರಿಯಾಂಕ್ ಖರ್ಗೆ ಮತ್ತಿತರರು ಪರಿಸ್ಥಿತಿ ಸಂಭಾಳಿಸಲು ಯತ್ನಿಸಿದರೂ ಬಿಜೆಪಿ ಸದಸ್ಯರು ಮಣಿಯಲಿಲ್ಲ. ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಶುರು ಮಾಡಿದರು. ಸ್ಪೀಕರ್ ಅವರು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಈ ಮಧ್ಯೆ ಸ್ಪೀಕರ್ ಕೊಠಡಿಯಲ್ಲಿ ಸಚಿವೆ ಹೆಬ್ಬಾಳ್ಕರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಚರ್ಚೆ ನಡೆಸಿದರು. ಮಹಿಳಾ/ಕಲ್ಯಾಣ ಇಲಾಖೆ ನಿರ್ದೇಶಕ ಮಹೇಶ್ ಬಾಬು ಅವರನ್ನೂ ಕರೆಸಿ ಡಿಕೆಶಿ ಮಾಹಿತಿ ಪಡೆದರು. ಬಳಿಕ ಮತ್ತೆ ಕಲಾಪ ಆರಂಭವಾಯಿತು.
ವಿಷಾದ ವ್ಯಕ್ತಪಡಿಸಿದ ಸಚಿವೆ: ಕಲಾಪಕ್ಕೆ ಮೂರು ದಿನಗಳ ಬಳಿಕ ಸದನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಂದರು. ಸಚಿವರು ಉತ್ತರ ಕೊಡುತ್ತಾರೆ ಧರಣಿ ಕೈಬಿಡಿ ಎಂಬ ಸ್ಪೀಕರ್ ಮನವಿಗೆ ವಿಪಕ್ಷಗಳು ಸ್ಪಂದಿ,ಸಿ ತಮ್ಮ ಸ್ಥಾನಗಳಿಗೆ ಮರಳಿದರು. ಈ ವೇಳೆಯೂ ಎರಡೂ ಕಡೆ ವಾಕ್ಸಮರ ನಡೆಯಿತು. ಕೊನೆಗೆ ಸ್ಪೀಕರ್ ಸೂಚನೆ ಮೇರೆಗೆ ಎದ್ದು ನಿಂತ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ತಿಂಗಳ ಕಂತಿನ ವಿಚಾರದಲ್ಲಿ ವ್ಯತ್ಯಯ ಆಗಿದ್ದು ಹೌದು, ಇದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಸದನದಲ್ಲಿ ಒಪ್ಪಿಕೊಂಡರು. ಯಾರಿಗಾದರೂ ತಾವು ಮಾತನಾಡಿದ್ದು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೆಬ್ಬಾಳ್ಕರ್ ಹೇಳಿದರು.
Laxmi News 24×7