ಬೆಳಗಾವಿ: ಚಳಿಗಾಲ ಅಧಿವೇಶನದ 4ನೇ ದಿನವೂ ಸಾಲು ಸಾಲು ಪ್ರತಿಭಟನೆಗಳು ನಡೆದವು. ರೈತರು, ಅಂಗನವಾಡಿ ಕಾರ್ಯಕರ್ತೆಯರು, ಮಾಜಿ ದೇವದಾಸಿಯರು, ಗ್ರಂಥಪಾಲಕರು, ರೈತರು ಸೇರಿ ಮತ್ತಿತರರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒಕ್ಕೊರಲಿನ ಆಗ್ರಹ ಮಾಡಿದರು.
ಅತ್ತ ಸುವರ್ಣ ವಿಧಾನಸೌಧ ವಿಧಾನಸಭೆ ಮತ್ತು ವಿಧಾನಪರಿಷತ್ ಒಳಗೆ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದ್ದರೆ, ಇತ್ತ ಹೊರಗಡೆ ಸುವರ್ಣ ಗಾರ್ಡನ್ ಬಳಿಯ ಟೆಂಟ್ ಮತ್ತು ಹಳೆ ಪಿ.ಬಿ.ರಸ್ತೆ ಧಾರವಾಡ ನಾಕಾ ಟೆಂಟ್ಗಳಲ್ಲಿ ಸರ್ಕಾರಕ್ಕೆ ಹಲವು ಸಂಘಟನೆಗಳು ಪ್ರತಿಭಟನೆ ಬಿಸಿ ಮುಟ್ಟಿಸಿದವು. ಬಹುತೇಕ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿದವು. ತಮಗೆ ನಿಗದಿಪಡಿಸಿದ್ದ ಜಾಗದಲ್ಲಿ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಮೊಳಗಿಸಿದರು. ಅಲ್ಲದೇ ಈ ವೇಳೆ ತಮ್ಮ ಮನವಿ ಸ್ವೀಕರಿಸಲು ಆಗಮಿಸಿದ ಸಚಿವರಾದ ಜಮೀರ್ ಅಹ್ಮದ್, ರಹೀಂಖಾನ್, ಸಚಿವ ಶಿವಾನಂದ ಪಾಟೀಲ ಅವರ ಮುಂದೆ ತಮ್ಮ ನೋವು ತೋಡಿಕೊಂಡರು. ನಾವು ಪ್ರತಿವರ್ಷವೂ ಅಧಿವೇಶನ ಸಮಯದಲ್ಲಿ ಪ್ರತಿಭಟನೆ ಮಾಡುತ್ತೇವೆ. ಆದರೆ, ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಈ ಬಾರಿ ಆದರೂ ನಮ್ಮ ಬೇಡಿಕೆ ಈಡೇರಿಸಿ ಅಂತಾ ಅಲವತ್ತುಕೊಂಡರು.
Laxmi News 24×7