ಬೆಳಗಾವಿ: ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಸೀಜ್ ಆಗಿರುವ ವಿಚಾರ. ಆ ವಿಚಾರ ಹೈಕಮಾಂಡ್ ಅಂಗಳದಲ್ಲಿ ಇರುವುದರಿಂದ ಯಾವುದೇ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಮಾಧ್ಯಮದವರ ಜೊತೆ ಮಾತನಾಡುತ್ತಾ, ನಮ್ಮ ತಂದೆ ಸಿದ್ದರಾಮನ್ಯವರೇ ಐದು ವರ್ಷ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾವುದೇ ಬದಲಾವಣೆ ಇಲ್ಲ. ಜನವರಿ ತಿಂಗಳಿನಲ್ಲಿ ಹೈಕಮಾಂಡ್ ಬದಲಾವಣೆ ಮಾಡುತ್ತಾರೆ ಎನ್ನುವುದು ಎಷ್ಟು ಸರಿ? ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಯಾರೇ ಏನೇ ಮಾತನಾಡಲಿ, ಈ ವಿಚಾರ ಹೈಕಮಾಂಡ್ ಅಂಗಳದಲ್ಲಿರುವುದರಿಂದ ಅದಕ್ಕೆ ಮಹತ್ವವಿಲ್ಲ. ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಸೀಜ್ ಆಗಿರುವ ವಿಚಾರವೆಂದು ಸ್ಪಷ್ಟಪಡಿಸಿದರು. ಯತೀಂದ್ರ ಅವರಿಗೆ ನೋಟಿಸ್ ನೀಡುತ್ತಾರಾ ಎಂಬ ವಿಚಾರಕ್ಕೆ, ನೋಟಿಸ್ ಕೊಡುವ ಪ್ರಕ್ರಿಯೆ ಎಲ್ಲವೂ ಈಗ ಮುಗಿದು ಹೋದ ಅಧ್ಯಾಯ ಎಂದರು.
ಡಿಕೆ ಶಿವಕುಮಾರ್ ಅವರ ಜೊತೆ ರಹಸ್ಯ ಸಭೆ ವಿಚಾರವಾಗಿ ಮಾತನಾಡಿ, ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಯಾವುದೇ ರಹಸ್ಯವಾಗಿ ಚರ್ಚೆ ಮಾಡಿಲ್ಲ. ರಹಸ್ಯ ಚರ್ಚೆ ಮಾಡೋಕೆ ಅದರಲ್ಲೇನಿದೆ? ನಾವು ಓಪನ್ ಆಗಿಯೇ ಚರ್ಚೆ ಮಾಡಿದ್ದೇವೆ ಎಂದರು.
Laxmi News 24×7