ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯೂ ಒಂದು. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಇದೀಗ ಕನಿಷ್ಠ ಬೆಂಬಲ ಬೆಲೆ 2400 ರೂಪಾಯಿ ನಿಗದಿ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ 600 ರೂಪಾಯಿ ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಸರ್ಕಾರ 3000 ರೂಪಾಯಿ ನೀಡಬೇಕು ಎಂದು ಹಾವೇರಿ ರೈತರು ಒತ್ತಾಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂಪಾಯಿ ನೀಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಹಾವೇರಿ ರೈತರು ಒತ್ತಾಯಿಸಿದ್ದಾರೆ. ಈಗಾಗಲೇ ಬೆಳಗಾವಿ ಕಬ್ಬು ಬೆಳೆಗಾರರು ಹೋರಾಟ ನಡೆಸಿ ತಮ್ಮ ಕಬ್ಬಿಗೆ ವೈಜ್ಞಾನಿಕ ಬೆಲೆ ಪಡೆದಿದ್ದಾರೆ. ಅವರು ಹಲವು ವರ್ಷಗಳಿಂದ ನಷ್ಟ ಅನುಭವಿಸಿ ಸಹಿಸಿದ್ದರು. ಪ್ರಸ್ತುತ ವರ್ಷ ಅವರ ಸಹನೆ ಮೀರಿ ಈ ರೀತಿ ಹೋರಾಟವಾಗಿದೆ. ಅದೇ ರೀತಿ ಹಾವೇರಿ ರೈತರು ಕಳೆದ ಕೆಲ ವರ್ಷಗಳಿಂದ ಮೆಕ್ಕೆಜೋಳ ಬೆಲೆಗಾಗಿ ಸಹನೆಯಿಂದ ಇದ್ದಾರೆ. ಈ ವರ್ಷ ಮೆಕ್ಕೆಜೋಳಕ್ಕೆ ಮೂರು ಸಾವಿರ ರೂಪಾಯಿ ನೀಡಿ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದರೆ ಹಾವೇರಿ ಜಿಲ್ಲೆಯ ಹಸಿರುಸೇನೆ ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟದ ಹಾದಿ ಹಿಡಿಯಲಿವೆ ಎಂದು ರೈತಸಂಘಗಳು ಎಚ್ಚರಿಕೆ ನೀಡಿವೆ.
3 ಸಾವಿರಕ್ಕಾಗಿ ಹೋರಾಟದ ರೂಪರೇಷೆ: ಹಾವೇರಿ ಜಿಲ್ಲೆಯ ರೈತರು ಇದೇ 24 ರವರೆಗೆ ಸರ್ಕಾರಗಳಿಗೆ ಗಡುವು ನೀಡಿದ್ದಾರೆ. ಸರ್ಕಾರ ನವಂಬರ್ 24 ರೊಳಗೆ ನಮಗೆ ಕ್ವಿಂಟಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೇ 24 ರ ನಂತರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟದ ಪೋಸ್ಟರ್ ಸಹ ರೈತರು ಬಿಡುಗಡೆ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮೆಕ್ಕೆಜೋಳ ಬೆಳೆಯುತ್ತಿದ್ದೇವೆ. ಸರ್ಕಾರ ನಮಗೆ ಬೆಲೆ ಕಡಿಮೆಯಾದರೇ ಖರೀದಿ ಮಾಡಬೇಕು. ಇಲ್ಲದಿದ್ದರೆ ಬಿತ್ತುವ ಮೊದಲೇ ಬಿತ್ತದಂತೆ ರೈತರಿಗೆ ತಿಳಿಸಬೇಕು. ಸರ್ಕಾರ ಈ ರೀತಿಯ ಮುಂಜಾಗ್ರತೆ ನೀಡಿದರೆ ರೈತರು ಈ ಪ್ರಮಾಣದಲ್ಲಿ ಮಕ್ಕೆಜೋಳ ಬೆಳೆಯುವದಿಲ್ಲ. ಸರ್ಕಾರ ಕೃಷಿಕೇಂದ್ರಗಳಲ್ಲಿ ಮಕ್ಕೆಜೋಳ ಬಿತ್ತನೆ ಮಾರಾಟ ಮಾಡಿ ಇದೀಗ ಅಧಿಕ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳ ಖರೀದಿ ಮಾಡುವುದಿಲ್ಲ ಎಂದರೆ ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. 24ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಂತರ ರಾಷ್ಟ್ರೀಯ ಹೆದ್ದಾರಿ 48 ಬಂದ್ ಮಾಡುತ್ತೇವೆ. ಮುಂದೆ ನಮ್ಮ ಹೋರಾಟ ಯಾವ ಸ್ವರೂಪ ಪಡೆಯುತ್ತೋ ಏನೋ ಗೊತ್ತಿಲ್ಲ ಎನ್ನುತ್ತಿದ್ದಾರೆ ರೈತರು.
Laxmi News 24×7