ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಜಾರಿಗೆ ತಂದಿರುವ ಡಿಜಿಟಲ್ ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಿಯಲ್ಲಿ ಜಾರಿಗೆ ಬಂದಿರುವ ಡಿಜಿಟಲ್ ಮೌಲ್ಯಮಾಪನ ಸರಿಯಾಗಿ ಮಾಡಿಲ್ಲವೆಂದು ಆರೋಪಿಸಿರುವ ನೂರಾರು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಒಮ್ಮೆ ನಡೆದ ಮೌಲ್ಯಮಾಪನದಿಂದ ಫೇಲ್ ಆದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಹಾಕಿದಾಗ ಕೆಲವರು ಫೇಲ್ ಆಗಿದ್ದು, ಮತ್ತೆ ಕೆಲವರು ಪಾಸ್ ಆಗಿದ್ದಾರೆ. ಪರೀಕ್ಷಾಂಗ ವಿವಿಯ ದಿನಗೂಲಿ ನೌಕರರಿಂದ ಉತ್ತರ ಪತ್ರಿಕೆಯ ಬಂಡಲ್ ಅದಲು ಬದಲಾದ ಕಾರಣಕ್ಕೆ ಮೌಲ್ಯ ಮಾಪನ ಎಡವಟ್ಟಾಗಿದೆ. ಹಿಂದಿನ ಸೆಮಿಸ್ಟರ್ಗಳಲ್ಲಿ ನೂರಕ್ಕೆ ನೂರು ಅಂಕ ತೆಗೆದ ವಿದ್ಯಾರ್ಥಿಗಳೂ ಕೂಡ ಈಗ ಫೇಲ್ ಆಗಿದ್ದಾರೆ. ಅದರಲ್ಲೂ ಕನ್ನಡ ವಿಷಯದಲ್ಲೂ ಅನುತ್ತೀರ್ಣ ಆಗಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.ದುಬಾರಿ ಮೌಲ್ಯಮಾಪನ ಶುಲ್ಕದ ವಿರುದ್ಧ ಆಕ್ರೋಶ: ವಿಶ್ವವಿದ್ಯಾನಿಲಯವು ಮರು ಮೌಲ್ಯಮಾಪನಕ್ಕೆ ದುಬಾರಿ ಶುಲ್ಕ ನಿಗದಿ ಮಾಡಿದೆ. ಇಲ್ಲಿ ಒಂದು ವಿಷಯಕ್ಕೆ ಒಂದು ಸಾವಿರ ರೂಪಾಯಿ ನಿಗದಿ ಮಾಡಿದೆ. ಅಲ್ಲದೆ ಫೋಟೋ ಕಾಪಿ ತೆಗೆಯಲು ಸಹ 1 ಸಾವಿರ ರೂ. ನಿಗದಿ ಮಾಡಿದೆ. ನಾವು ಚೆನ್ನಾಗಿ ಓದುವ ವಿದ್ಯಾರ್ಥಿಗಳಾಗಿದ್ದು, ಮನೆಯಲ್ಲಿ ಹಣ ಬೇಕು ಅಂದ್ರೆ ನಮಗೆ ಬೈಯುತ್ತಾರೆ. ವಿವಿ ಮಾಡಿದ ಎಡವಟ್ಟಿಗೆ ನಾವು ಬಲಿಯಾಗುತ್ತಿದ್ದೇವೆ. ಇದರಿಂದ ನಮಗೆ ವಿವಿಯು ಉಚಿತವಾಗಿ ಮರು ಮೌಲ್ಯಮಾಪನ ಮಾಡಿ ಕೊಡಬೇಕೆಂದು ಒತ್ತಾಯಿಸಿ ಇಲ್ಲಿನ ಸಹ್ಯಾದ್ರಿ ಕಾಲೇಜು ಬಳಿಯ ಕುವೆಂಪು ವಿವಿಯ ನಗರ ಶಾಖೆ ಬಳಿ ಪ್ರತಿಭಟನೆ ನಡೆಸಿದರು.
Laxmi News 24×7