ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಬ್ಯಾನರ್ಗಳು, ಬಂಟಿಂಗ್ ಹಾಗೂ ಫ್ಲೆಕ್ಸ್ಗಳ ಹಾವಳಿ ಮಿತಿಮೀರಿದೆ. ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಬ್ಯಾನರ್‌ಗಳನ್ನು ಅಳವಡಿಸಿರುವುದರಿಂದ ನಗರ ಸೌಂದರ್ಯಕ್ಕೂ ಧಕ್ಕೆಯಾಗಿದೆ. ಸುಗಮ ಸಂಚಾರಕ್ಕೂ ಸಮಸ್ಯೆಯಾಗಿದೆ. ಜೊತೆಗೆ ಮಹಾನಗರ ಪಾಲಿಕೆ ಆದಾಯಕ್ಕೂ ಕುತ್ತು ಬಂದಿದೆ.
ನಗರದಲ್ಲಿ ರಾಜಕೀಯ ಪಕ್ಷದ ಅಥವಾ ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೂಡ ಶುಭಕೋರುವ ಹಾಗೂ ಸ್ವಾಗತಕೋರುವ ಬ್ಯಾನರ್ಗಳು ದೊಡ್ಡ ಪ್ರಮಾಣದಲ್ಲಿವೆ. ಗೋಕುಲ ರಸ್ತೆಯ ವಿಮಾನ ನಿಲ್ದಾಣದಿಂದ ಹೊಸೂರಿನ ವೃತ್ತದವರೆಗಿನ ರಸ್ತೆ ವಿಭಜಕದ ಮಧ್ಯೆ ಸಾಲಾಗಿ ಆಳೆತ್ತರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಕಾರ್ಯಕ್ರಮ ಮುಗಿದು ಒಂದು-ಎರಡು ತಿಂಗಳಾದರೂ ತೆರವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ.
ಕೆಲವು ಶಾಸಕರ, ಪಾಲಿಕೆ ಸದಸ್ಯರ, ಉದ್ಯಮಿಗಳ ಅಥವಾ ಅವರ ಮಕ್ಕಳ ಜನ್ಮದಿನವಿದ್ದರಂತೂ ಆಯಾ ಮತಕ್ಷೇತ್ರ ಮತ್ತು ವಾರ್ಡ್‌ಗಳ ತುಂಬ ಅವರ ಭಾವಚಿತ್ರವಿರುವ ಬ್ಯಾನರ್ಗಳ ಹಾವಳಿ ಹೆಚ್ಚಾಗಿರುತ್ತದೆ.
ನಿರ್ಮಾಣ ಹಂತದ ಫ್ಲೈಓವರ್ ಕಾಮಗಾರಿ ಪಿಲ್ಲರ್ಗಳಿಗೂ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಾಕಿದ ಬ್ಯಾನರ್‌ಗಳನ್ನು ಈದ್ಗಾ ಮೈದಾನದ ತಡೆಗೋಡೆಗಳಿಗೆ ಹಾಗೂ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತದ ಬಳಿಯೂ ಹಾಕಲಾಗಿದೆ.ಮಹಾನಗರ ಪಾಲಿಕೆ ಅನುಮತಿ ಪಡೆದಿರುವ ಬ್ಯಾನರ್ ಕೆಳಗಡೆ ಪಾಲಿಕೆಯ ಅಧಿಕೃತ ಸೀಲ್ ಇರುತ್ತದೆ. ಆದ್ರೆ ನಗರದೆಲ್ಲೆಡೆ ಹಾಕಲಾಗಿರುವ ಬ್ಯಾನರ್, ಪ್ಲೆಕ್ಸ್ಗಳ ಮೇಲೆ ಯಾವುದೇ ಸೀಲ್ ಕೂಡ ಇಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Laxmi News 24×7