ಬೆಳಗಾವಿ: ಸಾಲಬಾಧೆ ತಾಳಲಾರದೇ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದಲ್ಲಿ ನಡೆದಿದೆ. ಸಾವಿಗೆ ಖಾಸಗಿ ಸೊಸೈಟಿ ಕಿರುಕುಳ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮನೆ ಮಾಲೀಕನ ಕಳೆದುಕೊಂಡ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ರೈತನ ಸಾವಿಗೆ ನ್ಯಾಯ ಕೊಡಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.
ಕಡೋಲಿ ಗ್ರಾಮದ ರೈತ ಸಾತೇರಿ ಹೊನ್ನಪ್ಪ ರುಟಕುಟೆ(78) ಆತ್ಮಹತ್ಯೆ ಮಾಡಿಕೊಂಡ ರೈತ. ಅ.31ರಂದು ಮಧ್ಯರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಹಿತ್ತಲಿನಲ್ಲಿ ಮನೆ ಗೋಡೆಯ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಪುತ್ರ, ಮೂವರು ಪುತ್ರಿಯರು ಸೇರಿ ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ರೈತ ಹಾಗೂ ಅವರ ಕುಟುಂಬ ತಮಗೆ ಸೇರಿದ್ದ 1 ಎಕರೆಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
“ಮಣ್ಣೂರಿನ ಮಾರ್ಕಂಡೇಯ ಕೋ ಆಪರೇಟಿವ್ ಸೊಸೈಟಿಯಲ್ಲಿ 12 ಲಕ್ಷ ಸಾಲ ತೆಗೆದುಕೊಂಡಿದ್ದೆವು. ಅದರಲ್ಲಿ ಈಗಾಗಲೇ 4 ಲಕ್ಷ ರೂ. ತುಂಬಿದ್ದೆವು. ಈಗ ಬಡ್ಡಿ ಸೇರಿ 16 ಲಕ್ಷ ರೂ. ಅ.31ರೊಳಗೆ ತುಂಬಬೇಕು. ಇಲ್ಲದಿದ್ದರೆ ನಿಮ್ಮ ಮನೆ ಹರಾಜು ಹಾಕಲಾಗುವುದು ಎಂದು ಸೊಸೈಟಿಯವರು ಮನೆ ಮುಂದೆ ನೋಟಿಸ್ ಅಂಟಿಸಿದ್ದರು. ಅಲ್ಲದೇ ಕಡೋಲಿ ಸೇರಿ ಸುತ್ತಲಿನ ನಾಲ್ಕು ಊರುಗಳಲ್ಲಿ ಡಂಗುರ ಕೂಡ ಹೊಡೆಸಿದ್ದರು. ಇನ್ನು ಸೊಸೈಟಿಯ 15 ಜನರು ಮತ್ತೆ ಅ.25ರಂದು ಬಂದು ಮನೆಗೆ ಬಂದು ಕಿರುಕುಳ ನೀಡಿದ್ದರು. ಇದರಿಂದ ಮನನೊಂದು ನಮ್ಮ ಯಜಮಾನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಸೊಸೈಟಿಯೇ ನೇರ ಹೊಣೆ. ನಮ್ಮ ಎಲ್ಲಾ ಸಾಲ ಮನ್ನಾ ಮಾಡಬೇಕು. ಇಲ್ಲವೇ ನಮ್ಮ ಯಜಮಾನರನ್ನು ನಮಗೆ ಜೀವಂತ ತಂದು ಕೊಡಿ” ಎಂದು ಆಗ್ರಹಿಸಿದರು.
ಮೃತ ರೈತ ಸಾತೇರಿ ಪುತ್ರಿ ಕವಿತಾ ಕಡೆಮನಿ ಮಾತನಾಡಿ, “ಮಾರ್ಕಂಡೇಯ ಸೊಸೈಟಿಯವರ ಕಿರುಕುಳದಿಂದಲೇ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ತಂದೆ ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿ ಅಲ್ಲ. ರಾತ್ರಿ 8 ಗಂಟೆಗೆ ಎಲ್ಲರ ಜೊತೆಗೆ ಮಾತನಾಡುತ್ತಾ ಊಟ ಮಾಡಿ, ಮಲಗಿದ್ದಾರೆ. ಅದಾದ ಬಳಿಕ ಎಲ್ಲರಿಗೂ ನಿದ್ದೆ ಹತ್ತಿದ ಮೇಲೆ ನೇಣು ಹಾಕಿಕೊಂಡಿದ್ದಾರೆ. ನಮ್ಮ ತಾಯಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ” ಎಂದರು.
ಹಿರಿಯ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಮಾತನಾಡಿ, “ಸಣ್ಣ ರೈತರನ್ನು ಉಳಿಸುವ ನಿಟ್ಟಿನಲ್ಲಿ ಒಂದು ತಜ್ಞರ ಸಮಿತಿ ರಚನೆ ಮಾಡಬೇಕು ಅಂತಾ ಕಳೆದ 20 ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ, ಸರ್ಕಾರ ಯಾವುದೇ ರೀತಿ ಕ್ರಮ ವಹಿಸುತ್ತಿಲ್ಲ. ಮೃತ ರೈತ ಸಾತೇರಿ ಅವರು ಹಿಂದಿನ ವರ್ಷ ಕ್ಯಾಬೇಜ್ ಬೆಳೆದಿದ್ದರು. ಒಳ್ಳೆಯ ದರ ಸಿಗದ ಹಿನ್ನೆಲೆಯಲ್ಲಿ 400 ಚೀಲ ಕ್ಯಾಬೇಜ್ ಹೊಲದಲ್ಲೇ ನಾಶ ಪಡಿಸಿದ್ದರು. ಹೀಗೆ ಆದಾಗ ಸಾಲ ಹೇಗೆ ತುಂಬುವುದು? ಕೊನೆಗೆ ಸೊಸೈಟಿ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ. ಸಣ್ಣ ರೈತರು ಮನೆ ಕಟ್ಟಿಕೊಳ್ಳಬಾರದಾ? ಮಕ್ಕಳ ಮದುವೆ ಮಾಡಬಾರದಾ? ರೈತನ ಸಾವಿಗೆ ನ್ಯಾಯ ಸಿಗಬೇಕು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
Laxmi News 24×7