Breaking News

ರಸ್ತೆ ಗುಂಡಿ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ‘ಗುಂಡಿಗಳಿಗೆ ಅವರ ಸರ್ಕಾರವೇ ಪಿತಾಮಹ’ – ಡಿಸಿಎಂ

Spread the love

ಬೆಂಗಳೂರು: ರಾಜ್ಯ ಸರ್ಕಾರವು ಕೂಡಲೇ ಕಾರ್ಯಪ್ರವೃತ್ತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು, ಅಪಘಾತಕ್ಕೆ ಕಾರಣವಾಗುವ ಹಾಗೂ ಜನರ ಜೀವಹಾನಿಗೆ ಕಾರಣವಾಗುತ್ತಿರುವ ರಸ್ತೆ ಗುಂಡಿಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ನಿಲ್ಲಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ನಗರದಲ್ಲಿ ಕಸದ ಸಮಸ್ಯೆ ಹಾಗೂ ಗುಂಡಿ ಬಿದ್ದ ರಸ್ತೆಗಳನ್ನು ಗುರುತಿಸಿ, ಸರ್ಕಾರದ ಗಮನ ಸೆಳೆಯಲು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

ಜನಜಾಗೃತಿ ಅಭಿಯಾನದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅಶೋಕ್, ರಸ್ತೆ ಗುಂಡಿಗಳನ್ನು ಮುಚ್ಚಲು 1,800 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಗುಂಡಿಗಳನ್ನು ಎಲ್ಲಿ ಮುಚ್ಚಿದ್ದಾರೆ? ಕಳಪೆ ಕಾಮಗಾರಿಯಿಂದಾಗಿ ಮುಚ್ಚಿರುವ ಗುಂಡಿಗಳು ಮತ್ತೆ ತೆರೆದುಕೊಂಡಿವೆ. ಅವುಗಳನ್ನು ಮುಚ್ಚುವುದಕ್ಕೂ ಹಣವಿರದ ಸರ್ಕಾರ ಇದು. ಗುಂಡಿಗಳನ್ನು ಮುಚ್ಚಲು ಒಂದು ವಾರದ ಗಡುವು ಕೇಳಿದ್ದ ಮುಖ್ಯಮಂತ್ರಿಗಳು, ಗಡುವು ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನ ಹೋಗಿ ಕೇಳಿ ಎನ್ನುತ್ತಿದ್ದಾರೆ. ಈ ರೀತಿ ಜವಾಬ್ದಾರಿ ರಹಿತ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ಆರೋಪಿಸಿದರು.

2 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಯಾಗಿಲ್ಲ. ಗ್ರೇಟರ್ ಬೆಂಗಳೂರು ಆದ ಮೇಲೆ ಹಣ ಬಿಡುಗಡೆಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಕಸದ ತೆರಿಗೆಯನ್ನು ಜಾಸ್ತಿ ಮಾಡಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲ, ಈ ಸರ್ಕಾರ ಪಾಪರ್ ಆಗಿದೆ. ರಸ್ತೆ ಗುಂಡಿಗಳಿಂದ ಮೃತಪಟ್ಟವರ ಶಾಪ ಈ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಅಶ್ವತ್ಥನಾರಾಯಣ, ರಸ್ತೆ ಗುಂಡಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ವಿಫಲವಾಗಿದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಗುಂಡಿಯಲ್ಲಿ ಬಿದ್ದು ಜನ ಸಾಯುತ್ತಿದ್ದಾರೆ. ಕೈಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚುವತ್ತ ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೈಲಿನ ಒಳಗೂ ಕಾನೂನು ಸುವ್ಯವಸ್ಥೆ ಇಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಶಾಸಕರಾದ ಎಸ್.ಸುರೇಶ್ ಕುಮಾರ್, ಎನ್.ಮುನಿರತ್ನ, ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಮುಖಂಡ ಉಮೇಶ್ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿಸಿಎಂ ಡಿಕೆಶಿ ತಿರುಗೇಟು: ಬಿಜೆಪಿ ಜನಜಾಗೃತಿ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ರಸ್ತೆ ಗುಂಡಿಗಳಿಗೆ ಬಿಜೆಪಿ ಸರ್ಕಾರವೇ ಪಿತಾಮಹ ಎಂದು ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಶೋಕ್ ಅವರ ಸರ್ಕಾರವೇ 20 ಸಾವಿರ ಗುಂಡಿ ತೋಡಿ ಕೋರ್ಟ್​​​ಗೆ ಅಫಿಡವಿಡ್ ಸಲ್ಲಿಕೆ ಮಾಡಿದ್ದಾರೆ. ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಅಂತ ಅವರಿಗೆ ಗೊತ್ತು. ಅವರ ಕ್ಷೇತ್ರಗಳಿಗೆಲ್ಲ ದುಡ್ಡು ಕೊಟ್ಟಿದ್ದೇವಲ್ಲಾ? ಗುಂಡಿ ಮುಚ್ಚಲಿ ಎಂದು ಕಿಡಿಕಾರಿದರು.

ಗುಂಡಿಗಳಿಗೆ ಅವರ ಸರ್ಕಾರವೇ ಪಿತಾಮಹ. ಗುಂಡಿ ಯಾವಾಗಲೂ ಇದ್ದೇ ಇರುತ್ತದೆ. ನಡೆಯುತ್ತಲೇ ಇರುತ್ತದೆ. ಮುಚ್ಚುತ್ತಲೇ ಇರುತ್ತೇವೆ. ನಮ್ಮ ಸರ್ಕಾರ ಎಷ್ಟು ಕೊಡಬೇಕು ಅಷ್ಟು ಕೊಡುತ್ತದೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ