ಬೆಳಗಾವಿ: ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್. ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಎಡಿಜಿಪಿ ಅವರು ಗಾಯಾಳುಗಳಿಗೆ ಧೈರ್ಯ ತುಂಬಿ, ಕಲ್ಲು ತೂರಾಟ ಘಟನೆ ಕುರಿತು ಮಾಹಿತಿ ಪಡೆದರು.![]()
ಈ ವೇಳೆ ಐಜಿಪಿ ಚೇತನ್ ಸಿಂಗ್ ರಾಥೋಡ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಡಿಜಿಪಿ ಹಿತೇಂದ್ರ ಆರ್, ಘಟನೆಯಲ್ಲಿ ನಮ್ಮ 11 ಜನ ಸಿಬ್ಬಂದಿಗೆ ಗಾಯಗಳಾಗಿವೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಅಂತ ಅಂದುಕೊಂಡಿದ್ದೆವು. ಆದರೂ ನಡೆದಿದೆ. ಹಾಗಾಗಿ ನಾನೇ ಖುದ್ದಾಗಿ ನಿನ್ನೆ ರಾತ್ರಿ ಬೆಳಗಾವಿಗೆ ಬಂದಿದ್ದೇನೆ. ನಮ್ಮ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ಘಟನಾ ಸ್ಥಳದಲ್ಲಿನ 40-50 ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಘಟನೆ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರ ಪ್ರತಿಭಟನೆಯಲ್ಲಿ ಒಂದು ದೊಡ್ಡ ಗುಂಪು ಕ್ರಿಯೇಟ್ ಆಗಿರುವುದರಿಂದ ಈ ರೀತಿ ಅಹಿತಕರ ಘಟನೆ ಆಗಿದೆ ಎಂದು ಹಿತೇಂದ್ರ ಆರ್. ತಿಳಿಸಿದರು.
Laxmi News 24×7