ಬೆಂಗಳೂರು: ಸಿಎಂ ಸಿದ್ದರಾಮಯ್ಯ ಈಗಾಗಲೇ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ನ.15ರಂದು ದೆಹಲಿಗೆ ತೆರಳುವುದಾಗಿಯೂ ಅವರು ತಿಳಿಸಿದ್ದಾರೆ. ಅಲ್ಲಿಗೆ ಸಂಪುಟ ಪುನಾರಚನೆಯತ್ತ ಚಿತ್ತ ಹರಿಸಿರುವ ಹಲವು ಕೈ ಶಾಸಕರ ಕನಸು ಚಿಗುರೊಡೆದಿದೆ. ಇದೀಗ ಮಂತ್ರಿಗಿರಿಯ ಕನಸು ನನಸಾಗುವ ನಿರೀಕ್ಷೆಯಲ್ಲಿ ಹಲವು ಶಾಸಕರಿದ್ದಾರೆ. ಬಿಹಾರ ಫಲಿತಾಂಶದ ಬಳಿಕ ಸಂಪುಟ ಪುನಾರಚನೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕಾಂಗ್ರೆಸ್ ನಾಯಕರೇ ತಿಳಿಸಿದ್ದಾರೆ.
ಹಿರಿಯರಿಗೆ ಕೊಕ್ ಬಗ್ಗೆ ಚರ್ಚೆ: ಸಂಪುಟ ಪುನಾರಚನೆ ವೇಳೆ ಸುಮಾರು 10-12 ಹಿರಿಯ ಮಂತ್ರಿಗಳಿಗೆ ಕೊಕ್ ನೀಡಿ ಪಕ್ಷ ಸಂಘಟನೆಗೆ ನಿಯೋಜಿಸಲು ಮುಂದಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡರೇ ದೃಢಪಡಿಸಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಪುನಾರಚನೆ ಆಗುತ್ತದೆ ಎಂದು ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು. ಸಚಿವ ಸಂಪುಟದಿಂದ ಹೊರಗಡೆ ಇದ್ದವರಿಗೆ ಅವಕಾಶ ಕೊಡಬೇಕೆಂದು ನಿರ್ಧಾರ ಆಗಿದೆ ಎಂದು ಹೇಳಿದ್ದಾರೆ.
ಅದರಲ್ಲೂ ಹಿರಿಯ ಸಚಿವರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಬಗ್ಗೆ ಈಗಾಗಲೇ ಚರ್ಚೆ ಜೋರಾಗಿದೆ. ಹೀಗಾಗಿ ಹೈಕಮಾಂಡ್ ಹೇಳಿದರೆ ಸುಮಾರು 10-12 ಹಿರಿಯ ಸಚಿವರು ಪದ ತ್ಯಾಗ ಮಾಡಲು ಮನಸ್ಸು ಸಿದ್ಧಪಡಿಸಿಕೊಂಡಿದ್ದಾರೆ. ಕೆಲ ಹಿರಿಯ ಸಚಿವರು ಬಹಿರಂಗವಾಗಿ ಪದತ್ಯಾಗಕ್ಕೆ ಸಿದ್ಧ ಎಂದು ಬಹಿರಂಗವಾಗಿ ಇರಾದೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದಷ್ಟು ಹಿರಿಯ ಸಚಿವರು ಪದತ್ಯಾಗದ ಬಗ್ಗೆ ಒಲವು ಹೊಂದಿಲ್ಲವಾದರೂ, ಹೈ ಕಮಾಂಡ್ ಹೇಳಿದರೆ ತ್ಯಾಗ ಮಾಡುವುದಾಗಿ ಪರೋಕ್ಷವಾಗಿ ಹೇಳುತ್ತಿದ್ದಾರೆ.
ಕೆಲ ಸಚಿವರಿಂದ ಪದತ್ಯಾಗದ ಮಾತು: ಇತ್ತ ಸಂಪುಟ ಪುನಾರಚನೆಯ ಚರ್ಚೆ ದಟ್ಟವಾಗುತ್ತಿದ್ದ ಹಾಗೇ ಕೆಲ ಸಚಿವರು ಪದತ್ಯಾಗಕ್ಕೆ ಮನಸ್ಸು ಸಿದ್ಧಪಡಿಸುತ್ತಿದ್ದಾರೆ. ಕೆಲ ಸಚಿವರು ತಮ್ಮ ಮಂತ್ರಿ ಸ್ಥಾನ ತ್ಯಾಗಕ್ಕೆ ಸಿದ್ಧ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿರುವ ಸಚಿವ ಕೃಷ್ಣ ಬೈರೇಗೌಡ, ಎರಡೂವರೆ ವರ್ಷಗಳ ಬಳಿಕ ಪುನರ್ ರಚನೆ ಆಗುತ್ತೆ. ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು. ಸಚಿವ ಸಂಪುಟದಿಂದ ಹೊರಗಡೆ ಇದ್ದವರಿಗೆ ಅವಕಾಶ ಕೊಡಬೇಕೆಂದು ನಿರ್ಧಾರ ಆಗಿದೆ. ಸಂಪುಟಕ್ಕೆ ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು ಎಂದು ಹೇಳುವ ಮೂಲಕ ಸಂಪುಟ ಪುನಾರಚನೆ ಬಗ್ಗೆ ಹೊಸ ಲೆಕ್ಕಾಚಾರ ಹುಟ್ಟು ಹಾಕಿದ್ದರು.
ಒಂದು ಹೆಜ್ಜೆ ಮುಂದೆ ಹೋಗಿ, ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಅರ್ಹತೆ ಮೀರಿ ನನಗೆ ಪಕ್ಷ ಅವಕಾಶ ಕೊಟ್ಟಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ, ಆದರೆ ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ. ಅವಕಾಶದ ವಿಚಾರದಲ್ಲಿ ನನಗೆ ಸಂತೃಪ್ತಿ ಇದೆ ಎಂದು ಪದ ತ್ಯಾಗದ ಮಾತುಗಳನ್ನು ಆಡಿದ್ದರು.
ಸಂಪುಟ ಪುನಾರಾಚನೆ ಸಾಧ್ಯತೆ ದಟ್ಟವಾಗುತ್ತಿರುವ ಬೆನ್ನಲ್ಲೇ ಇತ್ತ ಹಿರಿಯ ಮಂತ್ರಿಗಳು ಸಚಿವ ಸ್ಥಾನ ತ್ಯಾಗದ ಬಗ್ಗೆ ಇಂಗಿತ ಹೊರಹಾಕಿದ್ದಾರೆ. ಅದರಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮೊದಲಿಗರಾಗಿದ್ದಾರೆ. ಕಿರಿಯರಿಗೆ ಪದತ್ಯಾಗ ಮಾಡಲು ಸಿದ್ಧ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಈ ಪದ ತ್ಯಾಗದ ಪಟ್ಟಿಗೆ ಇನ್ನಷ್ಟು ಮಂತ್ರಿಗಳು ಸೇರಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಸಚಿವ ಬೋಸ್ ರಾಜ್, ಜಮೀರ್ ಅಹಮಸ್ ಖಾನ್, ದಿನೇಶ್ ಗುಂಡೂರಾವ್, ಸಚಿವ ಚಲುವರಾಯಸ್ವಾಮಿ ಪದ ತ್ಯಾಗಕ್ಕೆ ಸಿದ್ಧ, ಪಕ್ಷ ಸಂಘಟನೆ ಜವಾಬ್ದಾರಿವಹಿಸಲು ರೆಡಿ ಎಂಬ ಪರೋಕ್ಷ ಸುಳಿವನ್ನು ಈಗಾಗಲೇ ನೀಡಿದ್ದಾರೆ.
ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳಬೇಕು. ಅವರು ಪಾರ್ಟಿಯಲ್ಲಿರಬೇಕು. ಸರ್ಕಾರಕ್ಕೆ ಎರಡೂವರೆ ವರ್ಷ ಆಗಿದೆ. ಶಾಸಕರು, ಪರಿಷತ್ ಸದಸ್ಯರು ಸೇರಿ 175 ಜನ ಇದ್ದೇವೆ. ಎಲ್ಲರಿಗೂ ಸಚಿವ ಸ್ಥಾನದ ಬೇಡಿಕೆ ಇರುತ್ತದೆ. ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಡಬೇಕು. ಎಲ್ಲರಿಗೂ ಸಚಿವ ಸ್ಥಾನ ಕೇಳುವ ಹಕ್ಕಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ರೂ ತಲೆಬಾಗಬೇಕು ಎಂದು ಸಚಿವ ಬೋಸರಾಜು ತಿಳಿಸಿದ್ದಾರೆ.
ಇದೇ ದಾಟಿಯಲ್ಲಿ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದೇವೆ. 2016ರಲ್ಲಿ ನಾನೇ ಪಕ್ಷದ ಕೆಲಸ ಮಾಡ್ತೀನಿ ಅಂದಿದ್ದೆ. ಈಗಲೂ ಪಕ್ಷದ ಕೆಲಸ ಮಾಡುವುದಕ್ಕೆ ರೆಡಿ ಇದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಮುಖಗಳಿಂದ ಲಾಬಿ ಜೋರು: ಇತ್ತ ಸಂಪುಟ ಪುನಾರಾಚನೆ ಸುದ್ದಿ ದಟ್ಟವಾಗುತ್ತಿರುವ ಮಧ್ಯೆ ಕೈ ಶಾಸಕರಿಂದ ಮಂತ್ರಿ ಸ್ಥಾನಕ್ಕೆ ಲಾಬಿನೂ ಜೋರಾಗಿದೆ. ಈಗಾಗಲೇ ಒಂದಷ್ಟು ಕೈ ಹಿರಿಯ, ಕಿರಿಯ ಶಾಸಕರು ಮಂತ್ರಿ ಸ್ಥಾನದ ಬಗ್ಗೆ ಬಹಿರಂಗ ಒಲವು ವ್ಯಕ್ತಪಡಿಸಿದ್ದಾರೆ. ಅಕ್ರಮ ಆರೋಪದಿಂದ ಪಟ್ಟ ಕಳೆದುಕೊಂಡಿದ್ದ ಬಿ.ನಾಗೇಂದ್ರ ಹಾಗೂ ಮತಗಳ್ಳತನ
ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿ ಪದಚ್ಯುತಿಗೊಂಡಿದ್ದ ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.
ಇದರ ಜೊತೆಗೆ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ, ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಬಿ.ಕೆ.ಹರಿಪ್ರಸಾದ್, ಲಕ್ಷ್ಮಣ್ ಸವದಿ, ಬಿ.ಆರ್.ಪಾಟೀಲ್ ಸೇರಿದಂತೆ ಹಲವರು ಮಂತ್ರಿ ಸ್ಥಾನದ ಇಚ್ಛೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಹೊಸ ಮುಖಗಳಾದ ಬೇಳೂರು ಗೋಪಾಲಕೃಷ್ಣ, ರೂಪ ಶಶಿಧರ್, ಮಾಗಡಿ ಬಾಲಕೃಷ್ಣ, ಬಂಗಾರಪೇಟೆ ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ಅಜಯ್ ಸಿಂಗ್ ಸೇರಿ ಎರಡು ಡಜನ್ ಗೂ ಅಧಿಕ ಶಾಸಕರು ಲಾಬಿ ನಡೆಸುತ್ತಿದ್ದಾರೆ.
ಒಂದಷ್ಟು ಮಂದಿ ಸಿಎಂ ಸಿದ್ದರಾಮಯ್ಯ ಬಳಿ ಲಾಬಿ ನಡೆಸುತ್ತಿದ್ದರೆ, ಇನ್ನೊಂದಷ್ಟು ಮಂದಿ ಡಿ.ಕೆ.ಶಿವಕುಮಾರ್ ಬಳಿ ಮಂತ್ರಿಗರಿಗಾಗಿ ಲಾಬಿ ನಡೆಸುತ್ತಿದ್ದಾರೆ. ಹಿರಿಯ ಶಾಸಕರು ನೇರವಾಗಿ ಹೈ ಕಮಾಂಡ್ ಬಳಿಯೇ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯೋ ಎಂಬ ಬಗ್ಗೆ ಬಿಹಾರ ಫಲಿತಾಂಶದ ಬಳಿಕವೇ ಸ್ಪಷ್ಟವಾಗಲಿದೆ.
Laxmi News 24×7