Breaking News

101 ಕೆ.ಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವೇರಿದ ಯುವಕ

Spread the love

ಗಂಗಾವತಿ(ಕೊಪ್ಪಳ): ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸ ಎಂತಹ ಛಲದ ಸಾಧನೆಗೂ ಪ್ರೇರಣೆ ನೀಡುತ್ತದೆ ಎನ್ನುವುದಕ್ಕೆ ಯುವಕಯೊಬ್ಬ ಸಾಕ್ಷಿಯಾಗಿದ್ದಾನೆ. ಹನುಮಪ್ಪನ ಮೇಲೆ ಇರಿಸಿದ್ದ ಭಕ್ತಿ, ಈ ಯುವಕನಿಗೆ ನೂರು ಕೆ.ಜಿ. ಭಾರದ ಮೂಟೆ ಹೊತ್ತು ಬೆಟ್ಟ ಹತ್ತುವಂತೆ ಮಾಡಿದೆ.

ಕಡಿದಾದ ರಸ್ತೆ ಮತ್ತು ಮೆಟ್ಟಿಲು ಮಾರ್ಗ ಹೊಂದಿರುವ ತಾಲೂಕಿನ ಅಂಜನಾದ್ರಿಯ ಹನುಮಪ್ಪನ ಬೆಟ್ಟ ಹತ್ತುವುದು ಎಂದರೆ ಸಾಮಾನ್ಯ ಜನರಿಗೆ ಪ್ರಯಾಸವಾಗುತ್ತದೆ. ಅಂಥಹದ್ದರಲ್ಲಿ ಯುವಕನೊಬ್ಬ ಬರೋಬ್ಬರಿ 101 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿ ಗಮನ ಸೆಳೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಬಳಿಯ ಬಿಸಿಲದಿನ್ನಿ ಎಂಬ ಪುಟ್ಟ ಗ್ರಾಮದ 19 ವರ್ಷ ವಯಸ್ಸಿನ ನವೀನ್ ಬರಮಗೌಡ, 101 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

575 ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟವನ್ನು ಜೋಳದ ಚೀಲ ಹೊತ್ತು ಬೆಟ್ಟ ಹತ್ತಲು ಈ ಯುವಕ ಕೇವಲ ಒಂದೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾನೆ. ಮಾರ್ಗ ಮಧ್ಯೆ ಬಾಯಾರಿಕೆ ನೀಗಿಸಿಕೊಳ್ಳಲು ಎರಡು ಬಾರಿ ತಲಾ ಎರಡು ನಿಮಿಷ ವಿಶ್ರಾಂತಿ ಪಡೆದಿದ್ದರು. ಅತ್ಯಂತ ಪ್ರಯಾಸಪಟ್ಟು ಬೆಟ್ಟ ಏರಿದ ಬಳಿಕ ಯುವಕ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮಪ್ಪನ ಆಶೀರ್ವಾದ ಪಡೆದಿದ್ದಾನೆ. ನವೀನ್ ಸಾಹಸ ಮೆಚ್ಚಿದ ದೇಗುಲದ ವ್ಯವಸ್ಥಾಪನ ಮಂಡಳಿ ಆತನನ್ನು ಸನ್ಮಾನಿಸಿತು.

ಈ ಕುರಿತು ಮಾತನಾಡಿದ ನವೀನ್, ಊರಲ್ಲಿ ಭಾರ ಎತ್ತುವ, ಸಂಗ್ರಾಣಿ ಕಲ್ಲು ಎತ್ತುವ, ಮುಂಗೈಯಿಂದ ಭಾರ ಎತ್ತುವ, ಮೊಣಕಾಲು ಮೇಲೆ ಭಾರ ಹೊತ್ತು ನಡೆಯುವ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ.
ಕೂಡಲಸಂಗಮದಲ್ಲಿ ಇತ್ತೀಚೆಗೆ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತನಾದರೆ ಹನುಮಪ್ಪನ ಅಂಜನಾದ್ರಿ ಬೆಟ್ಟ ಹತ್ತುವುದಾಗಿ ಹರಕೆ ಹೊತ್ತಿದ್ದೆ. ಅಂದುಕೊಂಡಂತೆ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದೇನೆ. ಹೀಗಾಗಿ ಹೊತ್ತ ಹರಕೆ ತೀರಿಸಲು ಸೋಮವಾರ ಸ್ನೇಹಿತರೊಂದಿಗೆ ಬಂದು ಜೋಳದ ಮೂಟೆಯೊಂದಿಗೆ ಬೆಟ್ಟ ಹತ್ತಿದ್ದೇನೆ ಎಂದು ತಿಳಿಸಿದ.

ಮೂಟೆಯಲ್ಲಿದ್ದ 101 ಕೆ.ಜಿ ಜೋಳವನ್ನು ದೇಗುಲದ ಆಡಳಿತ ಮಂಡಳಿಗೆ ನೀಡಲಾಯಿತು. ನವೀನ್​ ಸ್ನೇಹಿತರಾದ ಸಾಗರ, ಮಂಜಪ್ಪ ಎರಜೆರಿ, ವಿಜಯ್ ಗಜಕಲ್, ಸಂಗಪ್ಪ ಕೆಲ್ಲೂರು, ವಿಠಲ್ ಮುದೂರು, ಉಮೇಶ ಶಿರೂರು ಸಾಥ್ ನೀಡಿದರು.

550 ಅಡಿ ಎತ್ತರವಿರುವ ಬೆಟ್ಟ: ಅತ್ಯಂತ ಸಂಕೀರ್ಣ ಮತ್ತು ಕಡಿದಾದ ದಾರಿ ಹೊಂದಿರುವ ಅಂಜನಾದ್ರಿ ಬೆಟ್ಟವು ನೆಲಮಟ್ಟದಿಂದ 550ಕ್ಕೂ ಹೆಚ್ಚು ಅಡಿ ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಹತ್ತಲು 575 ಮೆಟ್ಟಿಲುಗಳಿದ್ದು, ಸಾಮಾನ್ಯ ಜನರು ಈ ಬೆಟ್ಟ ಹತ್ತಲು ಪ್ರಯಾಸ ಪಡುತ್ತಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ