ಬೆಂಗಳೂರು: ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ, ಪ್ರಶಸ್ತಿಗಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ತೀರ್ಮಾನವಾಗಿದೆ. ಆದರೆ, ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು
70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಮತ್ತು 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಮಾತನಾಡಿದರು.
ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮದು ಸಾರ್ಥಕ ಬದುಕು ಆಗಲಿ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಹಾರೈಸಿದರು.
ಮನುಷ್ಯ ಹುಟ್ಟು – ಸಾವಿನ ನಡುವೆ ಎಷ್ಟರ ಮಟ್ಟಿಗೆ ಸಮಾಜಮುಖಿಯಾಗಿ ಬದುಕಿದ್ದೇವೆ, ಜೀವನದಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬುದರ ಆಧಾರದಲ್ಲಿ ಜೀವನ ಸಾರ್ಥಕವಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರವನ್ನು ನೋಡದೆ ಬಡತನದಲ್ಲಿ ಹಳ್ಳಿಗಾಡಿನಲ್ಲಿ ಜನರ ಸೇವೆ ಮಾಡಿದವರು ಹಾಗೂ ಅತ್ಯಂತ ಶ್ರೀಮಂತ ವ್ಯಕ್ತಿಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಗುರುತಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 13 ಮಂದಿ ಬೆಂಗಳೂರು ನಗರವನ್ನೇ ನೋಡಿಲ್ಲ. ಯಾವುದೇ ಅರ್ಜಿಯನ್ನು ಸ್ವೀಕರಿಸದೆಯೇ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಅಂತಹ ಸಾಧಕರನ್ನು ಗೌರವಿಸುತ್ತಿರುವುದು ಸೌಭಾಗ್ಯವೇ ಸರಿ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆದುಕೊಳ್ಳುವ ಬದಲಿಗೆ ಅರ್ಹರನ್ನು ಹುಡುಕಿ ಪ್ರಶಸ್ತಿ ನೀಡಿರುವುದು ಸಂತೋಷದ ಸಂಗತಿ. ಕನ್ನಡಿಗ ಎಂದರೆ ಶಾಂತಿಯ ಸಂಕೇತವಾಗಿದೆ ಎಂದು ತಿಳಿಸಿದರು.
Laxmi News 24×7