ಬೆಂಗಳೂರು: 56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ನೀಡಲಾಗುತ್ತಿರುವ ಪಿ-ಕ್ಯಾಪ್‌ನಲ್ಲಿ ಬದಲಾವಣೆ ಅಷ್ಟೇ ಅಲ್ಲದೆ ದಕ್ಷತೆ ಮೆರೆಯುವ ಮೂಲಕ ವೃತ್ತಿಯಲ್ಲಿ ಬದಲಾವಣೆಯಾಗಬೇಕು. ಈ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಕಾನ್ಸ್ಟೇಬಲ್ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪಿ ಕ್ಯಾಪ್ ಆಯ್ಕೆ ಮಾಡಿದ್ದು ನಾನೇ. 56 ವರ್ಷಗಳಿಂದ ಇದ್ದ ಕ್ಯಾಪನ್ನು ಇಂದು ಬದಲಾವಣೆ ಮಾಡಿದ್ದೇನೆ. ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ. ಕ್ಯಾಪ್ ಬದಲಾವಣೆಯಷ್ಟೇ ಅಲ್ಲದೆ, ವೃತ್ತಿಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆ ಕಾಣಬೇಕು ಎಂದರು.
ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ಯಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಶ್ರಮಿಸುವಂತೆಯೂ ಕರೆ ನೀಡಿದರು.
ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಮಾದಕವಸ್ತಗಳ ವಿರೋಧಿ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಅಪರಾಧಗಳನ್ನು ತಡೆಗಟ್ಟಿ, ಉತ್ತಮ ತನಿಖೆ ಮಾಡಿ ಶಿಕ್ಷೆ ಕೊಡಿಸುವ ಇಚ್ಚಾಶಕ್ತಿಹೊಂದಬೇಕು. ಪೊಲೀಸರು ಒಳ್ಳೆಯ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.
ಕೆಲವು ಪೊಲೀಸರು ರಿಯಲ್ ಎಸ್ಟೇಟ್ನೊಂದಿಗೆ ಶಾಮೀಲಾಗುತ್ತಾರೆ. ಡ್ರಗ್ಸ್ ಪೆಡ್ಲರ್ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಕಿವುಚಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್ಗಳಾಗುತ್ತಾರೆ ಎಂದು ಎಚ್ಚರಿಸಿದರು.
Laxmi News 24×7