ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಭಾದಿತ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಇದೀಗ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷ ಆದ ಬಳಿಕ ಸಂಪುಟ ಪುನಾರಚನೆ ಮಾಡಲಿಕ್ಕೆ ಅನುಮತಿ ಸಿಕ್ಕರೂ ಸಿಎಂ ಬದಲಾವಣೆ ಇಲ್ಲ. ಒಂದು ವೇಳೆ ಅನುಮತಿ ಸಿಗದೇ ಇದ್ದರೆ ರಾಜಕೀಯದ ಚಟುವಟಿಕೆಗೆಳು ನಡೆಯುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ. ಹೀಗೆ ಹೈಕಮಾಂಡ್ ಘೋಷಣೆ ಮಾಡಲಿದೆ ಎಂಬುವುದು ನನ್ನ ನಿರೀಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಸಿಎಂ ಬದಲಾವಣೆ ಆಗಲ್ಲ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಂದು ವೇಳೆ, ಬದಲಾವಣೆ ಮಾಡಬೇಕು ಎಂಬ ವಿಚಾರ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ, ಅದೇ ನಡೆಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ದಲಿತ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿ, ದಲಿತ ಸಿಎಂ ಕೂಗು ತಪ್ಪೇನಿದೆ?. ದಲಿತ ಸಿಎಂ ಆದರೆ ಸಂತೋಷ ಪಡಬೇಕು. ಆದರೆ ಯಾರು ಆಗಬೇಕು ಎಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಹೈಕೋರ್ಟ್ ಸೂಚನೆಯಂತೆ ಮಂಗಳವಾರ ಚಿತ್ತಾಪುರದಲ್ಲಿ ಶಾಂತಿ ಸಭೆ ನಡೆಯಲಿದೆ. ಶಾಂತಿ ಸಭೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತೋ ಆ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗುತ್ತದೆ. ನಂತರದಲ್ಲಿ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾರದೇ ಹಸ್ತಕ್ಷೇಪ ಇಲ್ಲ. ನ್ಯಾಯಾಲಯದ ಮುಂದೆ ಬಂದ ಬಳಿಕ ಯಾರ ಪ್ರತಿಷ್ಠೆಯೂ ಇಲ್ಲ. ನ್ಯಾಯಾಲಯದ ಸೂಚನೆಯೇ ಅಂತಿಮವಾಗಿದೆ ಎಂದು ತಿಳಿಸಿದರು.
Laxmi News 24×7