ಗಾಂಜಾ ಸೇವಿಸಿ ಅಸಹಜ ವರ್ತನೆ…
8 ಜನರ ವಿರುದ್ಧ ಕ್ರಮ ಕೈಗೊಂಡ ಬೆಳಗಾವಿ ಪೊಲೀಸ್…
ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ 8 ವ್ಯಕ್ತಿಗಳನ್ನು ಪೊಲೀಸರು ಬೇರೆ ಬೇರೆ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
ಹಲಗಾ ಗ್ರಾಮದ ಯಲ್ಲಪ್ಪ ಭೀಮಪ್ಪ ಯೇಶೂಟೆ (58) ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಮಾದಕ ಪದಾರ್ಥ ಸೇವಿಸಿ ವರ್ತಿಸುತ್ತಿದ್ದಾಗ ಹಿರೆಬಾಗೇವಾಡಿ ಠಾಣೆಯ ಪಿಎಸ್‌ಐ ಚಿ. ಕೆ. ಮಿಟಗಾರ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಬೆಳಗಾವಿಯ ಸೆಂಟ್ರಲ್ ಬಸ್‌ಸ್ಟಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಮಹಾಂತೇಶ ನಗರದ ಮೆಹಬೂಬ ಬಾಬಾಸಾಬ ದೇಸಾಯಿ (54) ಎಂಬಾತನನ್ನು ಮಾರ್ಕೆಟ್ ಠಾಣೆಯ ಪಿಎಸ್‌ಐ ವಿಠ್ಠಲ ಹಾವನ್ನವರ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನನ್ನು ಸಹ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಮಾರ್ಕೆಟ್ ಠಾಣೆಯ ಪೊಲೀಸರು ಛತ್ರಪತಿ ಶಿವಾಜಿ ನಗರದ ಶಹಬಾಜ ದಸ್ತಗೀರ ಬೋಜಗಾರ (54) ಎಂಬಾತನನ್ನು ಶಿವಾಜಿ ನಗರದ 1ನೇ ಕ್ರಾಸ್ ಹತ್ತಿರ ಬಂಧಿಸಿದ್ದಾರೆ. ಈತ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಪಿಎಸ್‌ಐ ವಿಠ್ಠ ಲ ಹಾವನ್ನವರ ನೇತೃತ್ವದಲ್ಲಿ ಆರೋಪಿಯ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.
ಕಾಕತಿ ಪೊಲೀಸ್ ಠಾಣೆಯ ಪಿಎಸ್‌ಐ ಮೃತ್ಯುಂಜಯ ಮಠದ ಹಾಗೂ ಸಿಬ್ಬಂದಿ, ಹೊನಗಾದ ನೇತಾಜಿ ಗಲ್ಲಿಯ ತಸ್ವೀರ ಮಹಮ್ಮದಹನೀಪ ಸನದಿ (33) ಎಂಬಾತನನ್ನು ರಸೋಯಿ ದಾಬಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಂಧಿಸಿದ್ದಾರೆ. ಈತನನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಹಾಗೂ ಸಿಬ್ಬಂದಿಯವರು ಪೀರನವಾಡಿ, ಸಿದ್ದೇಶ್ವರ ಗಲ್ಲಿಯ ವಿಶಾಲ ಸತ್ಯಪ್ಪ ಮಂಜಲಕರ (22) ಎಂಬಾತ ಮಚ್ಛೆ ಬಸ್‌ಸ್ಟ್ಯಾಂಡ್ ಹತ್ತಿರ ಅಸಹಜವಾಗಿ ವರ್ತಿಸುತ್ತಿದ್ದಾಗ ಬಂಧಿಸಲಾಯಿತು. ಈತನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ದಿನ, ಸಿದ್ದೇಶ್ವರ ಗಲ್ಲಿಯ ಗಜಾನನ ಮಧು ಯಳ್ಳೂರಕರ (24) ಎಂಬಾತ ಅಶೋಕ ಐರನ್ ಪ್ಲಾಂಟ್-2, ಮಚ್ಛೆ ಹತ್ತಿರ ಮಾದಕ ಪದಾರ್ಥ ಸೇವಿಸಿ ವರ್ತಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾದಕ ವಸ್ತುಗಳ ಸೇವನೆ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗನಗೌಡಾ ಕಟ್ಟಮನಿಗೌಡರ ಮತ್ತು ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ನೇತೃತ್ವದಲ್ಲಿ ಶಂಕರ ಸುರೇಶ ದಂಡಗಲ್ (33) ಮತ್ತು ಶ್ರೀಧರ ದುರ್ಗಪ್ಪ ಕಲಗುಟಗಿ (21) ಪೀರನವಾಡಿ ನಿವಾಸಿಗಳು) ಅವರನ್ನು ಕ್ರಮವಾಗಿ ಹೈದರು ಚೌಕ ಮತ್ತು ಹುಂಚ್ಯಾನಟ್ಟಿ ಗ್ರಾಮದ ಬಳಿ ಬಂಧಿಸಲಾಗಿದೆ.
ಬೆಳಗಾವಿ ಪೊಲೀಸರ ಈ ಕಾರ್ಯವನ್ನು ಪೊಲೀಸ ಆಯುಕ್ತರು, ಉಪಾಯುಕ್ತರು ಶ್ಲಾಘಿಸಿದ್ದಾರೆ.
Laxmi News 24×7