ಬೆಳಗಾವಿ: ಮುಂದಿನ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಅವರು ಹೇಳಿದ್ದು ಸೈದ್ಧಾಂತಿಕವಾಗಿ ಮಾತ್ರ. ಲೀಡರ್ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ. ಈಗ ಅದನ್ನು ಸತೀಶ್ ಜಾರಕಿಹೊಳಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರೇ ಮುಂದೆ ನಾಯಕರು ಆಗಬೇಕು ಅಂತಾ ಹೇಳಿದ್ದಾರಾ..? ಯಾರನ್ನು ಲೀಡರ್ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಮತ್ತು ಯತೀಂದ್ರ ನಾಯಕನನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಎರಡೂವರೆ ವರ್ಷ ಆದ ಮೇಲೆ ಮಾಡುವಂತೆ ಹೈಕಮಾಂಡ್ ಹೇಳಿತ್ತು. ಹಾಗಾಗಿ, ಹೈಕಮಾಂಡ್ ಹೇಳಿದರೆ ಸಂಪುಟ ವಿಸ್ತರಣೆ ಮಾಡುತ್ತೇನೆ. ನಾಲ್ಕು ತಿಂಗಳ ಹಿಂದೆ ಹೈಕಮಾಂಡ್ ಸಂಪುಟ ಪುನರ್ ರಚನೆ ಮಾಡುವಂತೆ ಹೇಳಿತ್ತು. ಆಗ ಸರ್ಕಾರಕ್ಕೆ ಎರಡೂವರೆ ವರ್ಷ ಆದ ಮೇಲೆ ಮಾಡೋಣ ಅಂತಾ ನಾನು ತಿಳಿಸಿದ್ದೆ. ಹಾಗಾಗಿ, ಎರಡೂವರೆ ವರ್ಷ ಆಗಲಿ. ಆಗ ಹೈಕಮಾಂಡ್ ಜೊತೆಗೆ ಮಾತನಾಡುತ್ತೇನೆ ಎಂದರು.
ದೆಹಲಿ ಪ್ರವಾಸದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಪಿಲ್ ಸಿಬಲ್ ಅವರು ಬರೆದಿರುವ ಪುಸ್ತಕ ಬಿಡುಗಡೆಗೆ ದೆಹಲಿಗೆ ಹೋಗುತ್ತಿದ್ದೇನೆ. ಆ ವೇಳೆ ಹೈಕಮಾಂಡ್ ಭೇಟಿ ಆಗುತ್ತಿರಾ ಎಂಬುದಕ್ಕೆ ನಾನು ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಆಗುತ್ತೇನೆ. ಭೇಟಿ ಆಗಲೇಬೇಕು, ಯಾಕೆಂದರೆ ಅದು ನಮ್ಮ ಹೈಕಮಾಂಡ್. ರಾಜ್ಯದಲ್ಲಿ ಏನು ನಡೆಯುತ್ತಿದೆ? ಹೇಗೆ ಆಡಳಿತ ನಡೆಯುತ್ತಿದೆ ಎಂಬುದನ್ನು ಹೈಕಮಾಂಡ್ಗೆ ತಿಳಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಬಾಬಾಸಾಹೇಬ ಪಾಟೀಲ ಒತ್ತಾಯಿಸಿದ್ದರು. ಹಾಗಾಗಿ, ಎರಡನೇ ಬಾರಿ ಕಿತ್ತೂರು ಉತ್ಸವಕ್ಕೆ ಬಂದಿದ್ದೇನೆ. ವೀರಜ್ಯೋತಿ ಯಾತ್ರೆಗೆ ನಾನೇ ಚಾಲನೆ ನೀಡಿದ್ದೆ. ಇದಾದ ಮೇಲೆ ಇಂದು ಉತ್ಸವದ ಸಮಾರೋಪ ಸಮಾರಂಭಕ್ಕೆ ಬಂದಿದ್ದೇನೆ. ಮುಂದಿನ ವರ್ಷ ನಡೆಯುವ ಉತ್ಸವಕ್ಕೆ ನಾನು ಮೂರನೇ ಬಾರಿಯೂ ಬರುವ ಪ್ರಯತ್ನ ಮಾಡುತ್ತೇನೆ. ಮುಂದಿನ ವರ್ಷ ಕಿತ್ತೂರು ಉತ್ಸವ ಹೇಗೆ ಮಾಡಬೇಕು ಎಂಬುದನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಬಿಡುತ್ತೇನೆ. ಕಾರ್ಯಕ್ರಮ ಯಾವ ರೀತಿ ಮಾಡುತ್ತಾರೆ ಅನ್ನೋದನ್ನು ನೋಡಿಕೊಂಡು ಹೆಚ್ಚಿನ ಅನುದಾನ ಉತ್ಸವಕ್ಕೆ ಕೊಡುವ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Laxmi News 24×7