ಹುಬ್ಬಳ್ಳಿ: ತ್ವರಿತ ಹಾಗೂ ಸಂಘಟಿತ ಕಾರ್ಯಾಚರಣೆ ಮೂಲಕ ನೈಋತ್ಯ ರೈಲ್ವೆ ವ್ಯಾಪ್ತಿಯ ರೈಲ್ವೆ ಸಂರಕ್ಷಣಾ ಪಡೆ ಮೈಸೂರು, ಆರು ತಿಂಗಳ ಗಂಡು ಮಗುವನ್ನು ಅಪಹರಣಕಾರಳಿಂದ ಕೇವಲ 30 ನಿಮಿಷಗಳಲ್ಲಿ ರಕ್ಷಿಸಿ ಪೋಷಕರಿಗೆ ಒಪ್ಪಿಸಿದೆ.
ಅಕ್ಟೋಬರ್ 22, 2025 ರಂದು ಬೆಳಗಿನ ಜಾವ 5:20ರ ಸುಮಾರಿಗೆ, ಆರ್.ಪಿ.ಎಫ್/ಮೈಸೂರು ಕಾನ್ಸ್ಟೇಬಲ್ ಸಿ.ಎಂ. ನಾಗರಾಜು ಅವರು ಮೈಸೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಮಗು ನಾಪತ್ತೆಯಾದ ಬಗ್ಗೆ ತಿಳಿಸಿ ಅಳುತ್ತಿದ್ದ ಮಹಿಳೆಯನ್ನು ಗಮನಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಈ ವಿಷಯವನ್ನು ಎಎಸ್ಐ ಪ್ರಾಸಿ ಮತ್ತು ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರಿಗೆ ತಿಳಿಸಿದರು. ಕೂಡಲೇ ಅಧಿಕಾರಿಗಳು ಸಿಸಿಟಿವಿ (CCTV) ಹುಡುಕಾಟ ಆರಂಭಿಸಿದರು.
ಸಿಸಿಟಿವಿ ಪರಿಶೀಲಿಸಿದಾಗ ಪತ್ತೆ: ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಪ್ಲಾಟ್’ಫಾರ್ಮ್ ನಂ. 6ರ ಮೂಲಕ ರೈಲು ಸಂಖ್ಯೆ 16206 ಅನ್ನು ಹತ್ತಲು ಹೋಗುವುದು ಕಂಡು ಬಂದಿತು. ಆರ್ಪಿಎಫ್ ತಂಡವು 5:50 ರೊಳಗೆ ಆ ಮಹಿಳೆಯನ್ನು ತಡೆದು, ಮಗುವನ್ನು ರಕ್ಷಿಸಿ ಆ ಮಗುವಿನ ಪೋಷಕರೊಂದಿಗೆ ಪುನಃ ಸೇರಿಸಿದೆ.
ಆರೋಪಿ ನ್ಯಾಯಾಂಗ ಬಂಧನಕ್ಕೆ: ಆರೋಪಿ ದೇವಿಕಾ (ಹೆಸರು ಬದಲಾಯಿಸಲಾಗಿದೆ), ಹಾಸನದ ನಿವಾಸಿಯಾಗಿದ್ದು, ಆಕೆಯನ್ನು ಜಿಆರ್ಪಿ (GRP)/ಮೈಸೂರಿಗೆ ಒಪ್ಪಿಸಲಾಗಿದ್ದು, ಜಿಆರ್ಪಿ ಯವರು ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 137(b) ಅಡಿ ಪ್ರಕರಣ(ಅಪರಾಧ ಸಂಖ್ಯೆ 25/2025) ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ರಕ್ಷಣಾ ಕಾರ್ಯವು ನಾಪತ್ತೆಯಾದ ಅಥವಾ ಅಪಹರಣಕ್ಕೊಳಗಾದ ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳೊಂದಿಗೆ ಪುನಃ ಸೇರಿಸಲು ಮೀಸಲಾದ ‘ಆಪರೇಷನ್ ನನ್ಹೆ ಫರಿಶ್ತೆ’ ಉಪಕ್ರಮದ ಅಡಿ ಆರ್ಪಿಎಫ್ ಸಿಬ್ಬಂದಿಯ ಜಾಗರೂಕತೆ, ತಂಡದ ಕಾರ್ಯ ಮತ್ತು ಸಿಸಿಟಿವಿ ಕಣ್ಗಾವಲು ಬಳಕೆಯನ್ನು ಎತ್ತಿ ತೋರಿಸುತ್ತದೆ.
ತಂತ್ರಜ್ಞಾನದ್ದೇ ನಿರ್ಣಾಯಕ ಪಾತ್ರ: ರೈಲ್ವೆ ಸುರಕ್ಷತಾ ಪಡೆಯು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದು ಮತ್ತೊಮ್ಮೆ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನೈಋತ್ಯ ರೈಲ್ವೆ ವಲಯದಾದ್ಯಂತ ಒಟ್ಟು 152 ರೈಲ್ವೆ ನಿಲ್ದಾಣಗಳಲ್ಲಿ 2,043 ಸಿಸಿಟಿವಿ ಕ್ಯಾಮೆರಾಗಳನ್ನು ನಿಲ್ದಾಣಗಳು, ಪ್ಲಾಟ್’ಫಾರ್ಮ್ ಗಳು ಮತ್ತು ಇತರ ನಿರ್ಣಾಯಕ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ 63 ನಿಲ್ದಾಣಗಳಲ್ಲಿ 859 ಕ್ಯಾಮೆರಾಗಳು, ಬೆಂಗಳೂರು ವಿಭಾಗದಲ್ಲಿ 27 ನಿಲ್ದಾಣಗಳಲ್ಲಿ 586 ಕ್ಯಾಮೆರಾಗಳು ಮತ್ತು ಮೈಸೂರು ವಿಭಾಗದಲ್ಲಿ 62 ನಿಲ್ದಾಣಗಳಲ್ಲಿ 598 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸುಧಾರಿತ ಕಣ್ಗಾವಲು ಜಾಲವು ತ್ವರಿತ ಪತ್ತೆ, ಅಪರಾಧ ತಡೆಗಟ್ಟುವಿಕೆ ಮತ್ತು ವೇಗದ ತುರ್ತು ಪ್ರತಿಕ್ರಿಯೆಗೆ ಅನುವು ಮಾಡಿಕೊಟ್ಟಿದೆ.
Laxmi News 24×7