ದಾವಣಗೆರೆ/ ಹಾವೇರಿ: ಮಾಜಿ ಸಂಸದ ರಮೇಶ್ ಕತ್ತಿ ವಾಲ್ಮೀಕಿ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕನಕ ಗುರುಪೀಠದ ಪ್ರಸನಾನಂದಪುರಿ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೇ ಜಿಲ್ಲಾ ನಾಯಕ ಸಮಾಜದಿಂದ ಬಡಾವಣೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಬಳಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಮಾತನಾಡಿ “ಬೆಳಗಾವಿ ಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಬಳಸಿದ ಭಾಷೆಯಿಂದ ಸಮಸ್ತ ಬೇಡ, ವಾಲ್ಮೀಕಿ ನಾಯಕ ಸಮಾಜಕ್ಕೆ ನೋವಾಗಿದೆ. ನಮ್ಮ ಸಮುದಾಯದ ಬಗ್ಗೆ ತುಂಬಾ ಅವಹೇಳನಕಾರಿ ಆಗಿ ಮಾತಾಡಿದ್ದಾರೆ. ಇದನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಜಾತಿ ಕಾರಣಕ್ಕೆ ಸಮುದಾಯದ ಮುಖ್ಯವಾಹಿನಿ ಯಿಂದ ದೂರ ಉಳಿದ ಕಾರಣಕ್ಕೆ ಕಾನೂನಿನಲ್ಲಿ ರಕ್ಷಣೆ ನೀಡಿದ್ದಾರೆ. ಕಾನೂನು ರಕ್ಷಣೆ ಕೊಟ್ಟು 78 ವರ್ಷಗಳಾದರೂ ರಮೇಶ ಕತ್ತಿ ಮನಸ್ಥಿತಿಯ ಕೆಲವರು ಈ ರೀತಿ ವರ್ತಿಸುತ್ತಿರುವುದು ಬೇಸರದ ವಿಚಾರ. ಸಮಾಜದ ವಿರುದ್ಧ ಅವಹೇಳನಕಾರಿ ಪದ ಬಳಸಿದ ರಮೇಶ್ ಕತ್ತಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.
ರಮೇಶ್ ಕತ್ತಿ ವಿರುದ್ಧ ಎಫ್ಐಆರ್: ದಾವಣಗೆರೆ ನಗರದ ಬಡಾವಣೆ ಪೋಲಿಸ್ ಠಾಣೆಯಲ್ಲಿ ರಮೇಶ್ ಕತ್ತಿ ವಿರುದ್ಧ ಜಿಲ್ಲಾ ನಾಯಕ ಸಮಾಜದ ವತಿಯಿಂದ ಎಫ್ಐಆರ್ ದಾಖಲಿಸಲಾಗಿದೆ. ರಮೇಶ್ ಕತ್ತಿಯವರನ್ನು ಬಂಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನು ರಾಜ್ಯಾದ್ಯಂತ ನಾಯಕ ಸಮಾಜದಿಂದ ಠಾಣೆಗಳಲ್ಲಿ ದೂರು ದಾಖಲಿಸಲು ನಿರ್ಧಾರ ಮಾಡಲಾಗಿದೆ. ಪ್ರತಿಭಟನೆ ಮಾಡಲು ಚಿಂತನೆ ನಡೆದಿದೆ ಎಂದು ಮುಖಂಡರು ತಿಳಿಸಿದರು.
ಹಾವೇರಿಯಲ್ಲೂ ಮಾಜಿ ಸಂಸದ ರಮೇಶ್ ಕತ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಹಾವೇರಿ: ಮಾಜಿ ಸಂಸದ ರಮೇಶ ಕತ್ತಿ ತಮ್ಮ ಸಮುದಾಯಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾವೇರಿ ವಾಲ್ಮೀಕಿ ಸಮುದಾಯ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿತು. ರಮೇಶ ಕತ್ತಿ ಪ್ರತಿಕೃತಿ ಮೆರವಣಿಗೆ ನಡೆಸಿತು. ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ರಮೇಶ ಕತ್ತಿ ಪ್ರತಿಕೃತಿಗೆ ಬೆಂಕಿಹಚ್ಚಲು ಪ್ರತಿಭಟನಾಕಾರರು ಮುಂದಾದರು. ಪ್ರತಿಭಟನಾಕಾರರು ಪ್ರತಿಕೃತಿಗೆ ಬೆಂಕಿಹಚ್ಚದಂತೆ ಪೊಲೀಸರು ತಡೆಯಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ವೃತ್ತದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ರಮೇಶ ಕತ್ತಿ ವಾಲ್ಮೀಕಿ ಸಮುದಾಯಕ್ಕೆ ಕ್ಷಮೆ ಕೇಳಬೇಕು. ಪೊಲೀಸ್ ಇಲಾಖೆ ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
Laxmi News 24×7