ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಹತ್ತನೇ ದಿನ. ಇಂದೂ ಕೂಡಾ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಸಿನಿಮಾ ನಟರಾದ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗು ಕಾಂತಾರ ಚಿತ್ರದ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದರು.
ಭಾನುವಾರವಾದ್ದರಿಂದ ಹೊರ ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹೀಗಾಗಿ ಧರ್ಮದರ್ಶನ ಸಾಲು ಬ್ಯಾರಿಕೇಡ್ ದಾಟಿ ಸುಮಾರು 4.5 ಕಿಲೋ ಮೀಟರ್ ದೂರದವರೆಗೂ ಸಾಗಿತ್ತು. ಶುಕ್ರವಾರದಿಂದ ಸಾಲು ಸಾಲು ರಜೆ ಇರುವುದರಿಂದಾಗಿ ಭಕ್ತರ ಸಂಖ್ಯೆ ಏರಿಕೆಯಾಗಿದ್ದು, ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಸಹಸ್ರಾರು ಭಕ್ತರು ನಿಂತಿದ್ದರು.
ಉಮಾಶ್ರಿ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಆಗಮಿಸಿ ದೇವಿಯ ದರ್ಶನ ಪಡೆದರು. ರಿಷಬ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಇನ್ನು, ನಿನ್ನೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಿದ ವೇಳೆ ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ಶಿಷ್ಟಾಚಾರ ಪಾಲಿಸಲಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡರುಗಳು ದೇವಾಲಯದ ಬಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಇಂದು ದರ್ಶನ ಸುಗಮವಾಗಿ ನಡೆದಿದೆ. ರಾತ್ರಿ 8ಕ್ಕೆ ದೇವಾಲಯದ ಗೇಟ್ ಕ್ಲೋಸ್ ಆಗುತ್ತೆ. 12 ಗಂಟೆಗೆ ದರ್ಶನ ನಿಲ್ಲುತ್ತದೆ. ನರಕ ಚತುದರ್ಶಿಯ ಹಿಂದಿನ ದಿನ ವಿಶೇಷ ಪೂಜೆ ಮಾಡಬೇಕಿರುವುದು ಸಂಪ್ರದಾಯ. ಹಾಗಾಗಿ, ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪೂಜೆ ಇರುತ್ತದೆ. ಸಂಜೆ ಇಲ್ಲಿಗೆ ಬರುವವರು ಈ ಮಾಹಿತಿಯನ್ನು ಅರ್ಥ ಮಾಡಿಕೊಂಡು ಬರಬೇಕು. ರಾತ್ರಿ ಇಲ್ಲಿ ಬಂದವರಿಗೆ ಬೆಳಗ್ಗೆಯೇ ದರ್ಶನ ಇರಲಿದೆ” ಎಂದು ತಿಳಿಸಿದರು.
Laxmi News 24×7