ಬೆಂಗಳೂರು: ”33 ಸಾವಿರ ಕೋಟಿ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲವೆಂದರೆ ಹೋರಾಟ ಮಾಡುವುದು ಖಂಡಿತ” ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗಿನ ಸಭೆ ಬಳಿಕ ಶನಿವಾರ ಸಂಜೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಡಿಸೆಂಬರ್ ಒಳಗೆ ಬಿಲ್ ಕ್ಲೀಯರ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಿಎಂ ಜೊತೆಗೆ ಸಭೆ ಮಾಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಬಾಕಿ ಬಿಲ್ ಪೇಮೆಂಟ್ ಆಗದಿದ್ದರೆ ರಾಜ್ಯಪಾಲರ ಮೊರೆ ಹೋಗುತ್ತೇವೆ. ನಾವು ಯಾವುದೇ ಆರೋಪ ಮಾಡಿಲ್ಲ. ಕಮಿಷನ್ ಇರುತ್ತೆ. ನಾವು ಬಂದಿರುವುದು ಬಾಕಿ ಬಿಲ್ ಪೇಮೆಂಟ್ ಕೇಳುವುದಕ್ಕೆ. ನಾಲ್ಕು ನಿಗಮಗಳಿಗೆ 50 ಲಕ್ಷ ಪೇಮೆಂಟ್ ಕೊಡುತ್ತೇವೆ ಅಂದಿದ್ದಾರೆ. 33 ಸಾವಿರ ಕೋಟಿ ಹಣ ಬಿಡುಗಡೆ ಮಾಡಿಲ್ಲವೆಂದರೆ ಹೋರಾಟ ಖಂಡಿತ” ಎಂದು ತಿಳಿಸಿದರು.
“ಮೊದಲಿಗೆ ಜನವರಿಗೆ ಬಾಕಿ ಬಿಲ್ ಪಾವತಿ ಮಾಡುತ್ತೇವೆ ಅಂದರು. ನಂತರ ಡಿಸೆಂಬರ್ ತಿಂಗಳಿಗೆ ಎಂದರು. 8 ಇಲಾಖೆಗಳ ಗುತ್ತಿಗೆದಾರರು ಕಷ್ಟದಲ್ಲಿದ್ದಾರೆ ಅಂತಿದ್ದಾರೆ. ಹಬ್ಬಕ್ಕೆ ಪೇಮೆಂಟ್ ಆಗಿಲ್ಲ ಅಂದಿದ್ದೇವೆ. ಅವರು ಸರಿ ಮಾಡಿಸುತ್ತೇವೆ ಅಂತಾ ಹೇಳಿದರು. 50 ಲಕ್ಷದವರೆಗೂ ರಿಲೀಸ್ ಫಂಡ್ನಲ್ಲಿ ಕೊಡುತ್ತೇವೆ ಅಂದಿದ್ದಾರೆ” ಎಂದರು.
ಇದಕ್ಕೂ ಮುನ್ನ, ಶುಕ್ರವಾರ ಚಾಮರಾಜಪೇಟೆ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಸುದ್ದಿಗೋಷ್ಟಿ ನಡೆಸಿ, “ನಾವು ಕೋರ್ಟ್ಗೆ ಹೋಗಲ್ಲ, ಕೆಲಸ ನಿಲ್ಲಿಸುತ್ತೇವೆ. ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡ್ತೇವೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿದ್ದಾರೆ. ಸಿಎಂ ಮೇಲೆ ಬಹಳ ಭರವಸೆ ಇಟ್ಟಿದ್ದೆವು. ಸಿಎಂ ಅವರನ್ನು ಐದಾರು ಬಾರಿ ಭೇಟಿ ಮಾಡಿದ್ದೇವೆ. ಒಬ್ಬೊಬ್ಬ ಸಚಿವರನ್ನು ಭೇಟಿ ಮಾಡಿದ್ದೇವೆ. PWD ಇಲಾಖೆಯಲ್ಲಿ 9 ಸಾವಿರ ಕೋಟಿ ಬಾಕಿಯಿದೆ. Pwd ಇಲಾಖೆ ಜ್ಯೇಷ್ಠತೆಯನ್ನು ಪಾಲಿಸುತ್ತಿದೆ. ಹಿರಿತನ ಆಧಾರಿತವಾಗಿ ಹಣ ಕೊಡುತ್ತಿದ್ದಾರೆ. ಉಳಿದ ಇಲಾಖೆಗಳಲ್ಲಿ ಈ ನಿಯಮ ಆಗುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ 12 ಸಾವಿರ ಕೋಟಿ ಬಿಲ್ ಬಾಕಿ ಇದೆ. ಸರ್ಕಾರದಿಂದ ಒಟ್ಟು 33 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ” ಎಂದು ದೂರಿದ್ದರು.
“ಸರ್ಕಾರದಲ್ಲಿ ಲಂಚ ಇಲ್ಲ ಅಂತ ಹೇಳುವುದಿಲ್ಲ. ಕಮಿಷನ್ ಇಲ್ಲ ಎಂದು ಹೇಳುವುದಿಲ್ಲ. ಅದೇನು ಅಂತ ಡಿಸೆಂಬರ್ನಲ್ಲಿ ಹೇಳ್ತೇವೆ. ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟಾಗಿದೆ. 40%, 60%, 80% ಕಮಿಷನ್ ಅಂತ ನಾನು ಹೇಳಿಲ್ಲ. ಗುತ್ತಿಗೆದಾರರು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾರೆ. ಹಣ ಬಿಡುಗಡೆ ಮಾಡಿಲ್ಲ ಅಂದರೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಡಿಸೆಂಬರ್ನಲ್ಲಿ ರಾಜ್ಯಪಾಲರಿಗೆ ದೂರು ಕೊಡ್ತೇವೆ. ರಾಹುಲ್ ಗಾಂಧಿಗೂ ದೂರು ಕೊಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ಗೆ ದೂರು ಕೊಡುತ್ತೇವೆ” ಎಂದು ತಿಳಿಸಿದ್ದರು.
Laxmi News 24×7