ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಉದ್ಘಾಟನೆ ಮಾಡಿದ್ದು, ಈ ಯೋಜನೆಗೆ ದೇಶದಲ್ಲಿ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಕರ್ನಾಟಕದ ಆರು ಜಿಲ್ಲೆಗಳಿದ್ದು, ಅದರಲ್ಲಿ ಹಾವೇರಿಯೂ ಒಂದಾಗಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವಲ್ ಮೂಲಕ ಯೋಜನೆಗೆ ಚಾಲನೆ ನೀಡಿದ್ದು, ಸಂಸದ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಹನುಮನಹಟ್ಟಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ಧನ ಧಾನ್ಯ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಜ್ಯದ ಆರು ಜಿಲ್ಲೆಗಳು ಆಯ್ಕೆ: ದೇಶದಲ್ಲಿನ ಇಳುವರಿ ಕಡಿಮೆ ಇರುವ ದೇಶದ 100 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ತುಮಕೂರು, ಚಿತ್ರದುರ್ಗ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಸೇರಿವೆ.
ಯೋಜನೆಯ ಲಾಭಗಳು: ಪ್ರಧಾನಮಂತ್ರಿ ಧನ ಧಾನ್ಯ ಅಭಿಯಾನ ಯೋಜನೆ ಅಡಿ ಕೃಷಿ ಕ್ಷೇತ್ರಕ್ಕೆ ಅಧಿಕ ಸಾಲ ಕೊಡಿಸುವುದು, ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಅವಶ್ಯಕತೆ ಇರುವುದಿಲ್ಲ. ಈ ಮೊದಲು ಕೃಷಿಗೆ ಸರ್ಕಾರ ಜಿಲ್ಲೆಯಲ್ಲಿ ಶೇ.14 ರಷ್ಟು ವೆಚ್ಚ ಮಾಡುತ್ತಿತ್ತು. ಈ ಯೋಜನೆ ಅನುಷ್ಠಾನದಿಂದ ಜಿಲ್ಲೆಯಲ್ಲಿ ಕೃಷಿಗೆ ಶೇ.24ರಷ್ಟು ವೆಚ್ಚ ಮಾಡಲಾಗುತ್ತದೆ. ರೈತರ ಜೀವನ ಮಟ್ಟ ಸುಧಾರಿಸುವುದು, ಸಮಗ್ರ ಕೃಷಿ ಹಾಗೂ ರೈತರ ಆರ್ಥಿಕ ಸುಧಾರಣೆಯು ಈ ಯೋಜನೆಯ ಉದ್ದೇಶ. ಈ ಯೋಜನೆಯ ಅನುಷ್ಠಾನದಿಂದ ಜಿಲ್ಲೆಯಲ್ಲಿ ಕೃಷಿ ಉತ್ಪಾದಕತೆ ಹೆಚ್ಚಾಗಲಿದೆ.
Laxmi News 24×7