ಬೆಂಗಳೂರು: ಪ್ರತಿಷ್ಠಿತ ರಾಮೋಜಿ ಗ್ರೂಪ್ ಆಫ್ ಕಂಪನೀಸ್ಗೆ ಸೇರಿದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ ಮಾರ್ಗದರ್ಶಿ ಚಿಟ್ಸ್ ಕಂಪನಿಯ ಮೂರು ಹೊಸ ಶಾಖೆಗಳನ್ನು ಈ ವರ್ಷಾಂತ್ಯದೊಳಗೆ ಕರ್ನಾಟಕದಲ್ಲಿ ಪ್ರಾರಂಭಿಸಲಾಗವುದು ಎಂದು ಮಾರ್ಗದರ್ಶಿ ಚಿಟ್ಸ್ನ ಕರ್ನಾಟಕ ಪ್ರಾದೇಶಿಕ ವಿಭಾಗದ ಮುಖ್ಯಸ್ಥರಾದ ಪಿ.ಲಕ್ಷ್ಮಣರಾವ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಅರಮನೆ ರಸ್ತೆಯ ಬಳಿ ಮಾರ್ಗದರ್ಶಿ ಚಿಟ್ಸ್ ಕರ್ನಾಟಕ ಪ್ರಾದೇಶಿಕ ವಿಭಾಗದ ನೂತನ ಕೇಂದ್ರ ಕಚೇರಿ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ
‘ ಮಾತನಾಡಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಜಿ.ರಸ್ತೆ, ಸಿಂಧನೂರು ಮತ್ತು ಚಿಕ್ಕಮಗಳೂರಿನಲ್ಲಿ ಮಾರ್ಗದರ್ಶಿ ಚಿಟ್ಸ್ನ ಹೊಸ ಶಾಖೆಗಳನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪ್ರಾರಂಭಿಸಲು ಭರದ ಸಿದ್ಧತೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.ನಾಲ್ಕು ವರ್ಷಗಳಲ್ಲಿ 23 ಹೊಸ ಶಾಖೆ ಗುರಿ: ಕರ್ನಾಟಕದಲ್ಲಿ 2030ರ ವೇಳೆಗೆ ಮಾರ್ಗದರ್ಶಿ ಚಿಟ್ ಫಂಡ್ನ ಒಟ್ಟು 50 ಶಾಖೆಗಳನ್ನು ಹೊಂದುವ ಗುರಿ ಇದೆ.
ಈಗಾಗಲೇ ರಾಜ್ಯದಲ್ಲಿ 27 ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ನಾಲ್ಕು ವರ್ಷಗಳ ಅವಧಿಯಲ್ಲಿ 23 ಹೊಸ ಶಾಖೆಗಳನ್ನು ವಿವಿಧ ನಗರಗಳಲ್ಲಿ, ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು. ಜನಸಾಮಾನ್ಯರ ಉಳಿತಾಯ ಯೋಜನೆ, ವಾಣಿಜ್ಯ ಚಟುವಟಿಕೆ ಹಾಗೂ ಆರ್ಥಿಕ ಅಗತ್ಯತೆಗಳಿಗೆ ಮಾರ್ಗದರ್ಶಿ ಚಿಟ್ಸ್ ಕಂಪನಿ ನೆರವಾಗಲಿದೆ ಎಂದು ಅವರು ಹೇಳಿದರು.
50 ಸಾವಿರಕ್ಕೂ ಹೆಚ್ಚಿನ ಗ್ರಾಹಕರು: ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಮಾರ್ಗದರ್ಶಿ ಚಿಟ್ಸ್ ಕಂಪನಿ ಕರ್ನಾಟಕದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಮಂಗಳೂರು ಹಾಗೂ ಶಿವಮೊಗ್ಗ ಮುಂತಾದೆಡೆ ಶಾಖೆಗಳನ್ನು ಹೊಂದಿದೆ. ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಗ್ರಾಹಕರು ಮಾರ್ಗದರ್ಶಿ ಚಿಟ್ಸ್ ಕಂಪನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವರ್ಷದಿಂದ ವರ್ಷಕ್ಕೆ ಗ್ರಾಹಕರುಗಳ ಸಂಖ್ಯೆ ಮತ್ತು ಸಂಸ್ಥೆಯ ವಹಿವಾಟು ವೃದ್ಧಿಸತೊಡಗಿದೆ ಎಂದು ಪಿ.ಲಕ್ಷ್ಮಣರಾವ್ ಅವರು ಕಂಪನಿಯ ಸಾಧನೆಗಳ ಬಗ್ಗೆ ವಿವರ ನೀಡಿದರು.
ಮಾರ್ಗದರ್ಶಿ ಚಿಟ್ಸ್ ಕರ್ನಾಟಕ ಪ್ರಾದೇಶಿಕ ವಿಭಾಗದ ಕೇಂದ್ರ ಕಚೇರಿ ಉದ್ಘಾಟನೆ ವೇಳೆ ಮಂಗಳ ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ, ಹೋಮ ಹವನಗಳು ವಿಜೃಂಭಣೆಯಿಂದ ಜರುಗಿದವು. ಈ ಸಂದರ್ಭದಲ್ಲಿ ಚಿಟ್ಸ್ ಕಂಪನಿಯ ಕರ್ನಾಟಕ ವಿಭಾಗದ ಜನರಲ್ ಮ್ಯಾನೇಜರ್ ನಂಜುಂಡಯ್ಯ, ಬಸವೇಶ್ವರನಗರ ಶಾಖೆ ಹಿರಿಯ ವ್ಯವಸ್ಥಾಪಕ ಗೋವಿಂದರಾವ್, ಜಯನಗರ ಮಾರ್ಗದರ್ಶಿ ಶಾಖೆಯ ಹಿರಿಯ ವ್ಯಸ್ಥಾಪಕ ಶಿವಕುಮಾರ್ ನಾಯ್ಡು ಗಾಂಧಿನಗರ ಶಾಖೆ ಹಿರಿಯ ವ್ಯವಸ್ಥಾಪಕ ಸತ್ಯನಾರಾಯಣ, ಹಿರಿಯ ಅಧಿಕಾರಿಗಳಾದ ವಿಶ್ವನಾಥರಾವ್, ವಿಜಯಕುಮಾರ್ ಅವರು ಸೇರಿದಂತೆ ಮಾರ್ಗದರ್ಶಿ ಚಿಟ್ಸ್ ಕಂಪನಿಯ ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ, ಗ್ರಾಹಕರು, ಹಿತೈಶಿಗಳು ಉಪಸ್ಥಿತರಿದ್ದರು. ಎಲ್ಲರೂ ಮಾರ್ಗದರ್ಶಿ ಚಿಟ್ಸ್ ಕರ್ನಾಟಕದ ಮುಖ್ಯಸ್ಥರಾದ ಪಿ.ಲಕ್ಷ್ಮಣರಾವ್ ಅವರಿಗೆ ಶುಭ ಕೋರಿ ಯಶಸ್ಸಿಗೆ ಹಾರೈಸಿದರು.
Laxmi News 24×7