ಬೆಂಗಳೂರು: ರಾಜ್ಯದಲ್ಲಿ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿರುವ ಹೈಕೋರ್ಟ್, ಎಲ್ಲ ದತ್ತಾಂಶವನ್ನು ಸೋರಿಕೆಯಾಗದಂತೆ ಸಂರಕ್ಷಣೆ ಮಾಡಬೇಕು ಎಂಬುದಾಗಿ ಷರತ್ತು ವಿಧಿಸಿದೆ.
ರಾಜ್ಯಲ್ಲಿ ನಾಗರಿಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ಮುಂದುವರಿಸಿತು.
ವಾದ ಮುಂದುವರೆಸಿದ ಹಿಂದುಳಿದ ವರ್ಗಗಳ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ದತ್ತಾಂಶ ಸಂಗ್ರಹಿಸಿರುವ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆಯೇ ಎಂದು ನ್ಯಾಯಾಲಯ ಕೇಳಿತ್ತು. ಹೈಕೋರ್ಟ್ ಕಳವಳದ ಹಿನ್ನೆಲೆ ಆಯೋಗದ ಸರ್ವೆಯ ವಿಧಾನವನ್ನು ಮರುಪರಿಶೀಲಿಸಿದ್ದೇವೆ. ಈ ಸಂಬಂಧ ಸಮೀಕ್ಷೆ ಮಾಡುವವರಿಗೆ ಮಾಹಿತಿ ನೀಡಲಾಗಿದೆ. ಲಿಂಗಾಯತ ಸಮುದಾಯವು ಹೊಸ ಸಮೀಕ್ಷೆ ನಡೆಸಬೇಕೆಂದು ಕೋರಿದ್ದರು. ಅಲ್ಲದೇ, ಒಕ್ಕಲಿಗರ ಸಂಘವು ಹಿಂದಿನ ಸಮೀಕ್ಷೆಯನ್ನು ತಿರಸ್ಕರಿಸಬೇಕೆಂದು ಸರ್ಕಾರಕ್ಕೆ ಮನವಿ ನೀಡಿತ್ತು. ಈ ದಾಖಲೆಯನ್ನೂ ಪೀಠದ ಗಮನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಮತ್ತು ಆಯೋಗದ ಪರ ವಾದಕ್ಕೆ ಪ್ರತಿಕ್ರಿಯೆಯಾಗಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಆಧಾರ್ ಕಾಯ್ದೆಯ ನಿಬಂಧನೆಗಳನ್ನು ಸರ್ಕಾರ ಪಾಲಿಸಬೇಕು. 2023ರ ಜಯಪ್ರಕಾಶ್ ಹೆಗ್ಡೆ ವರದಿಯ ಬಗ್ಗೆ ಹೇಳಲಾಗಿದೆ. ಆಯೋಗವು ಆ ವರದಿಯನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯ ಅಡಿ ನಡೆಸಲಾಗಿರುವ ಸಮೀಕ್ಷೆಯನ್ನು ಸಂಪುಟದ ಮುಂದೆ ಇಡಬೇಕು. ಹೀಗಾಗಿ, ಇದನ್ನು ಕೈಬಿಡಲಾಗಿದೆ ಎನ್ನಲಾಗದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಪರ್ಯಾಯವಾಗಿ ಗಣತಿ ಮಾಡಲಾಗದು. ಸಮೀಕ್ಷೆಯ ಹೆಸರಿನಲ್ಲಿ ಪ್ರಾಯೋಗಿಕವಾಗಿ ಗಣತಿ ಮಾಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
Laxmi News 24×7