ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯಿಂದ ದಿಢೀರ್ ಮಾತೃ ಇಲಾಖೆ ಆರೋಗ್ಯ ಇಲಾಖೆಗೆ 20ಕ್ಕೂ ಅಧಿಕ ತಜ್ಞವೈದ್ಯರನ್ನು ವರ್ಗಾವಣೆ ಮಾಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಇಲಾಖೆ ಎಚ್ಚೆತ್ತುಗೊಂಡಿದೆ. ಹಾವೇರಿ ಜಿಲ್ಲಾಸ್ಪತ್ರೆಯ 23 ವೈದ್ಯರಲ್ಲಿ 13 ವೈದ್ಯರ ಆದೇಶ ರದ್ದು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ.
13 ವೈದ್ಯರನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ. ಇದರಿಂದಾಗಿ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 2 ವರ್ಷ, 5 ವರ್ಷ ಕರ್ತವ್ಯ ನಿರ್ವಹಿಸಿದ್ಧ ವೈದ್ಯರನ್ನು ಆರೋಗ್ಯ ಇಲಾಖೆ 14-09-2025 ರಂದು ಮಾತೃ ಇಲಾಖೆಗೆ ಬರುವಂತೆ ಸೂಚಿಸಿತ್ತು.
ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯರನ್ನು ಕರೆಸಿಕೊಂಡಿತ್ತು. ಸರ್ಕಾರದ ದಿಢೀರ್ ನಡೆಗೆ ಬಡ ರೋಗಿಗಳು ಕಂಗಾಲಾಗಿದ್ದರು. ಅರವಳಿಕೆ ತಜ್ಞರು, ಎಲುಬು ಕೀಲು ತಜ್ಞರು, ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಕರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.
ವೈದ್ಯರ ವರ್ಗಾವಣೆಯಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಜೆರಿಯನ್ ಹೆರಿಗೆಗೂ ಸಮಸ್ಯೆಯಾಗಿತ್ತು. ಅರವಳಿಕೆ ತಜ್ಞರು ಒಬ್ಬರೇ ಇರೋ ಹಿನ್ನೆಲೆ ಸಿಜೆರಿಯನ್ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿ ಮಹಿಳೆಯರು ಪರದಾಟ ನಡೆಸಿದ್ದರು. ತಜ್ಞವೈದ್ಯರ ಕೊರತೆ ಇದೆ, ಶಸ್ತ್ರ ಚಿಕಿತ್ಸೆಗಳೂ ಬಂದ್ ಎಂದು ನಾಮಫಲಕ ಹಾಕಿದ್ದರು. ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಕೊನೆಗೂ 13 ತಜ್ಞ ವೈದ್ಯರನ್ನು ವಾಪಸ್ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದೆ. ಇಲಾಖೆಯ ಆದೇಶದಿಂದ ಬಡರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅಲೆಮಾರಿ ಜಿಲ್ಲಾಧ್ಯಕ್ಷ ವಿಭೂತಿ ಶೆಟ್ಟಿ ಅವರು ಈ ಬಗ್ಗೆ ಮಾತನಾಡಿ, “ಹಾವೇರಿ ಜಿಲ್ಲಾಸ್ಪತ್ರೆ 8 ತಾಲೂಕಿಗೆ ಹೆಡ್ ಆಗಿದೆ. ಇದುವೇ ದೊಡ್ಡ ಆಸ್ಪತ್ರೆ ಎಂದು 8 ತಾಲೂಕಿನ ರೋಗಿಗಳು ಇಲ್ಲಿಗೆ ಬಂದು ದಾಖಾಲಾಗುತ್ತಾರೆ. ಈ ರೋಗಿಗಳಿಗೆ ಸಮಸ್ಯೆ ಏನೆಂದರೆ ಪ್ರಮುಖವಾಗಿ ವೈದ್ಯರು ಬೇಕು. ತುರ್ತು ಚಿಕಿತ್ಸೆಯ ಸಂದರ್ಭಗಳು ಇರುತ್ತವೆ. ಹೀಗಿದ್ದಾಗ ಆಸ್ಪತ್ರೆಯ 23 ವೈದ್ಯರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರೆ, ಇಲ್ಲಿನ 8 ತಾಲೂಕಿನ ರೋಗಿಗಳು ಇದೊಂದೇ ಆಸ್ಪತ್ರೆಗೆ ಬಂದರೆ ಎಷ್ಟು ದೊಡ್ಡ ಸಮಸ್ಯೆಯಾಗುತ್ತದೆ ಎಂಬುದನ್ನು ನಾವು ಅನುಭವಿಸಿದ್ದೇವೆ. ಇದೇ ರೀತಿ ಆಸ್ಪತ್ರೆಗೆ ಬಂದ ತುರ್ತು ಪರಿಸ್ಥಿತಿಯಲ್ಲಿದ್ದ ಎಷ್ಟೋ ಜೀವಗಳು ಹೋಗಿವೆ. ಅದೇ ಕಾರಣದಿಂದ ವರ್ಗಾವಣೆಗೊಂಡ 23 ವೈದ್ಯರಲ್ಲಿ ಮತ್ತೆ 13 ಮಂದಿಯನ್ನು ನಮ್ಮ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನೂ 10 ಮಂದಿ ವೈದ್ಯರನ್ನು ನಮ್ಮ ಜಿಲ್ಲಾಸ್ಪತ್ರೆಗೆ ಸೇರಿಸಿದರೆ ಜನರಿಗೆ ಅನುಕೂಲವಾಗುತ್ತದೆ, ಜತೆಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
Laxmi News 24×7