ವಿಜಯಪುರ, ಸೆಪ್ಟೆಂಬರ್ 18: ಸಪ್ಟೆಂಬರ್ 16 ರ ಸಾಯಂಕಾಲ ವಿಜಯಪುರ (Vijayapura) ಜಿಲ್ಲೆ ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ (SBI Bank) ದರೋಡೆಯಾಗಿತ್ತು. ಮುಸುಕು ಹಾಕಿದ್ದ ಐವರು ದರೋಡೆಕೋರರ ಗ್ಯಾಂಗ್ ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಇತರೆ ಅಧಿಕಾರಿಗಳು, ಸೆಕ್ಯೂರಿಟಿ ಗಾರ್ಡ್ ಹಾಗೂ ಕೆಲ ಗ್ರಾಹಕರಿಗೆ ಕಂಟ್ರೀ ಪಿಸ್ತೂಲ್ ತೋರಿಸಿ ಕೈಕಾಲು ಕಟ್ಟಿ ಹಾಕಿ ಕೊಠಡಿಯಲ್ಲಿ ಕೂಡಿ ಹಾಕಿ ನಗದು ಚಿನ್ನಾಭರಣ ದೋಚಿತ್ತು. 1.5 ಕೋಟಿ ರೂಪಾಯಿ ನಗದು, 20 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿತ್ತು. ದರೋಡೆಕರರು ಬಿಡಿ ಬಿಡಿಯಾಗಿ ಮಹಾರಾಷ್ಟ್ರದತ್ತ ಪಲಾಯನ ಮಾಡಿದ್ದರು. ಓರ್ವ ದರೋಡೆಕೋರನ ಇಕೋ ವಾಹನ ಹಾಗೂ ಒಂದು ಮೊಬೈಲ್ ಪೊಲೀಸರಿಗೆ ಸಿಕ್ಕಿದ್ದು, ತನಿಖೆ ಜೋರಾಗಿ ನಡೆಯುತ್ತಿದೆ.
ಉನ್ನತ ಮೂಲಗಳ ಮಾಹಿತಿ ಪ್ರಕಾರ, ಬ್ಯಾಂಕ್ ಅಧಿಕಾರಿಗಳ, ಸಿಬ್ಬಂದಿಯ, ಸೆಕ್ಯುರಿಟಿ ಗಾರ್ಡ್ ನಿರ್ಲಕ್ಷ್ಯ ದರೋಡೆಕೋರರಿಗೆ ವರವಾಗಿ ಪರಿಣಮಿಸಿದ್ದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಭದ್ರತೆ ವಿಚಾರದಲ್ಲಿ ಇವರೆಲ್ಲಾ ಸರಿಯಾದ ಕ್ರಮ ಪಾಲನೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗೆ ಓರ್ವ ಶಸ್ತ್ರ ಸಜ್ಜಿತ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಹಾಗೇ ಚಡಚಣದ ಎಸ್ಬಿಐ ಬ್ಯಾಂಕಿಗೂ ಓರ್ವ ಸೆಕ್ಯೂರಿಟಿ ಗಾರ್ಡ್ ಇದ್ದ. ಆದರೆ ದರೋಡೆ ನಡೆದ ದಿನ ಈ ಸೆಕ್ಯೂರಿಟಿ ಗಾರ್ಡ್ ಎಲ್ಲಿದ್ದ? ಏನು ಮಾಡುತ್ತಿದ್ದ? ದರೋಡೆಕೋರರು ಒಳ ಹೋಗುವಾಗ ಹಾಗೂ ನಂತರ ಏನು ಮಾಡುತ್ತಿದ್ದ ಎಂದು ತನಿಖೆ ನಡೆಸಿರೋ ಪೊಲೀಸರಿಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ.
ಝೆರಾಕ್ಸ್, ಪಾಸ್ಬುಕ್ ಎಂಟ್ರಿ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್!
ಐವರು ದರೋಡೆಕೋರರ ಪೈಕಿ ಇಬ್ಬರು ಬ್ಯಾಂಕ್ ಹೊರಗಡೆ ನಿಂತಿದ್ದರು. ಓರ್ವ ಮೊದಲೇ ಬ್ಯಾಂಕ್ ಒಳಗಡೆ ಇದ್ದ. ಮತ್ತಿಬ್ಬರು ಬ್ಯಾಂಕ್ ಒಳಗೆ ಹೋಗಿ ಮ್ಯಾನೇಜರ್, ಕ್ಯಾಷಿಯರ್, ಇತರೆ ಅಧಿಕಾರಿಗಳು, ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿ ಕೈಕಾಲು ಕಟ್ಟಿ ಹಾಕುವ ವೇಳೆ ಸೆಕ್ಯೂರಿಟಿ ಗಾರ್ಡ್ ತಡೆಯಲು ಹೋಗಿರಲಿಲ್ಲವೇ ಎಂದು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ, ಬ್ಯಾಂಕ್ನ ಝೆರಾಕ್ಸ್ ಕೊಠಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ವಿವಿಧ ದಾಖಲೆಗಳ ಝರಾಕ್ಸ್ ಮಾಡುತ್ತಿದ್ದ ಹಾಗೂ ಪಾಸ್ ಬುಕ್ ಎಂಟ್ರಿ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ದರೋಡೆಕೋರರು ಮ್ಯಾನೇಜರ್ ಸೇರಿ ಇತರರನ್ನು ಕಟ್ಟಿ, ಕೂಡಿ ಹಾಕಿದಾಗ ಅದು ಸೆಕ್ಯುರಿಟಿ ಗಾರ್ಡ್ ಗಮನಕ್ಕೇ ಬಂದಿರಲಿಲ್ಲ. ಆತನಿಗೆ ನೀಡಿದ್ದ ಬಂದೂಕು ಸಹ ಬೇರಡೆ ಇಟ್ಟಿದ್ದನಂತೆ. ಎಲ್ಲರಂತೆ ದರೋಡೆಕೋರರು ಸೆಕ್ಯೂರಿಟಿ ಗಾರ್ಡ್ನನ್ನೂ ಸಹ ಕೂಡಿ ಹಾಕಿ ದರೋಡೆ ಮಾಡಿದ್ದಾರೆ. ಇದೆಲ್ಲಾ ಬ್ಯಾಂಕ್ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
Laxmi News 24×7