Breaking News
Home / ಜಿಲ್ಲೆ / ಬೆಂಗಳೂರು / 29ರಂದು ಬಿಎಸ್‍ವೈ-ಷಾ ಭೇಟಿ, ಸಂಕ್ರಾಂತಿಗೆ ಸಂಪುಟಕ್ಕೆ ಸರ್ಜರಿ ಫಿಕ್ಸ್..?

29ರಂದು ಬಿಎಸ್‍ವೈ-ಷಾ ಭೇಟಿ, ಸಂಕ್ರಾಂತಿಗೆ ಸಂಪುಟಕ್ಕೆ ಸರ್ಜರಿ ಫಿಕ್ಸ್..?

Spread the love

ಬೆಂಗಳೂರು,ಡಿ.25- ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ ಬಂದಿದ್ದು, ಸಂಕ್ರಾಂತಿ ಹಬ್ಬದ ನಂತರ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಕರ್ನಾಟಕದ ಬೆಳವಣಿಗೆಗಳ ಕುರಿತಂತೆ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ.  ಇದರ ನಡುವೆಯೇ ಜ.14 ಮತ್ತು 15ರಂದು ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಆಗಮಿಸುತ್ತಿದ್ದಾರೆ. ಇಲ್ಲಿ ನೂತನವಾಗಿ ಆರಂಭಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್) ಘಟಕವನ್ನು ಉದ್ಘಾಟಿಸುವರು.

ಮೇಲ್ನೋಟಕ್ಕೆ ಅಮಿತ್ ಷಾ ಅವರ ಭೇಟಿ ಇಲಾಖೆಗೆ ಮಾತ್ರ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಆ ವೇಳೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆಯಾಗುತ್ತದೆ ಎನ್ನಲಾಗಿದೆ.  ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ವಿಜಯೇಂದ್ರ ದಿನಕ್ಕೊಬ್ಬರಂತೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ. ನಿನ್ನೆ ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಇನ್ನು ಕೆಲವು ನಾಯಕರನ್ನು ಭೇಟಿಯಾಗುವ ಸಂಭವವಿದೆ ಎನ್ನಲಾಗುತ್ತದೆ.

ಮೂಲಗಳ ಪ್ರಕಾರ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಬಿಎಸ್‍ವೈ ಅವರು ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆಯಾದರೆ ತೆಗೆದುಕೊಳ್ಳಬಹುದಾದ ಸಂಭವನೀಯ ಅಭ್ಯರ್ಥಿಗಳು ಇಲ್ಲವೇ ಪುನಾರಚನೆಯಾದರೆ ಯಾರನ್ನು ಕೈಬಿಟ್ಟು ಇನ್ಯಾರನ್ನು ತೆಗೆದುಕೊಳ್ಳಬಹುದು ಎಂಬ ಪಟ್ಟಿ ರವಾನೆಯಾಗಿದೆ ಎನ್ನಲಾಗುತ್ತಿದೆ.

ಸಂಕ್ರಾಂತಿ ವೇಳೆ ಖಾಲಿ ಇರುವ ಎಲ್ಲ ಸ್ಥಾನಗಳು ಭರ್ತಿಯಾಗಲಿವೆ ಎಂದು ಹೇಳಲಾಗಿದೆ. ಬೇರೆ ಪಕ್ಷದಿಂದ ಬಂದು ಸರ್ಕಾರ ರಚನೆಗೆ ಕಾರಣವಾಗಿದ್ದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್‍ಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಇತ್ತೀಚೆಗಷ್ಟೇ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮುನಿರತ್ನಗೆ ಸಚಿವ ಸ್ಥಾನ ಸಿಗಲಿದೆಯೋ ಇಲ್ಲವೋ ಎಂಬುದು ಖಚಿತವಾಗಿಲ್ಲ.

ಕೆಲ ಬಿಜೆಪಿ ನಾಯಕರು ಮುನಿರತ್ನಗೆ ಸಚಿವ ಸ್ಥಾನ ನೀಡಬೇಕೆಂದು ಹೇಳಿದ್ದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡುವ ಅಭಿಪ್ರಾಯಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಮಹಿಳಾ ಕೋಟಾದಲ್ಲಿ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಕೈಬಿಟ್ಟು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಸ್ಥಾನ ನೀಡಬೇಕೆಂಬ ಲೆಕ್ಕಾಚಾರ ರಾಜ್ಯ ಬಿಜೆಪಿ ನಾಯಕರಲ್ಲಿದೆ. ಧಾರ್ವಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬದಲಿಗೆ ಅದೇ ಸಮುದಾಯದ ಕಾರ್ಕಳ ಶಾಸಕ ಸುನೀಲ್‍ಕುಮಾರ್‍ಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಯಾಗಿದೆ.
ಇವೆಲ್ಲದರ ಮಧ್ಯೆ ಕಳೆದೆರೆಡು ದಿನಗಳಿಂದ ದೆಹಲಿಯಲ್ಲಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುರುವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ್ದು, ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪನವರು ಸಂಪುಟ ಪುನಾರಚನೆಗೆ ಒಲವು ತೋರಿದ್ದರಾದರೂ ಹೈಕಮಾಂಡ್ ಅನುಮತಿ ಕೊಡುತ್ತಿಲ್ಲ. ರಾಜ್ಯದಲ್ಲಿ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆಯಾಗಬಹುದೆಂಬ ನಿರೀಕ್ಷೆಯಿತ್ತು. ಇದಕ್ಕಾಗಿ ಬಿಎಸ್‍ವೈ ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮೂರು ದಿನದಲ್ಲಿ ಅಭಿಪ್ರಾಯವನ್ನು ತಿಳಿಸುವುದಾಗಿ ನಡ್ಡಾ ಹೇಳಿ ತಿಂಗಳೇ ಕಳೆದರೂ ಸಂಪುಟ ವಿಸ್ತರಣೆ ಈಗಲೂ ನೆನಗುದಿಗೆ ಬಿದ್ದಿದೆ.ಒಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟಕ್ಕೆ ತೆಗೆದುಕೊಳ್ಳಲು ಸಿಎಂ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಂದಿದ್ದ ಎಂಟಿಬಿ ನಾಗರಾಜ್, ಮುನಿರತ್ನ, ಆರ್.ಶಂಕರ್ ಈಗಾಗಲೇ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ. ಪ್ರತಿ ದಿನ ಮುಖ್ಯಮಂತ್ರಿಗಳನ್ನು ಭೇಟಿಯಾಗುವುದು, ಮಾತುಕತೆ ನಡೆಸುವುದು ಸರ್ವೆ ಸಾಮಾನ್ಯವಾಗಿದೆ.

ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕೆಂದು ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಹೇಳಿದ್ದರು. ಹೀಗಾಗಿ ಸಂಕ್ರಾಂತಿ ನಂತರ ನೆನೆಗುದಿಗೆ ಬಿದ್ದಿರುವ ವಿಸ್ತರಣೆ ಮತ್ತೆ ಗರಿಗೆದರುವ ಸಂಭವವಿದೆ.  ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆಯೇ ಈ ಎಲ್ಲವೂ ಅವಲಂಬಿತವಾಗಿದೆ.

ಇದೇ 29ರಂದು ಸಿಎಂ ಬಿಎಸ್‍ವೈ ಅವರು ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.  ಭದ್ರಾವತಿಯಲ್ಲಿ ಆರಂಭವಾಗಲಿರುವ ಕೇಂದ್ರೀಯ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‍ಎಎಫ್) ಘಟಕ ಉದ್ಘಾಟಿಸುವಂತೆ ಅಧಿಕೃತವಾಗಿ ಅವರು ಆಹ್ವಾನ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಅವರ ಪುತ್ರರೂ ಆಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅಮಿತ್ ಷಾ ಅವರನ್ನು ಆಹ್ವಾನಿಸಿದ್ದಾರೆ. ಇದೇ ನೆಪದಲ್ಲಿ ಬಿಎಸ್‍ವೈ ದೆಹಲಿಗೆ ತೆರಳಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸುವ ಲೆಕ್ಕಾಚಾರದಲ್ಲಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ