ಬೆಂಗಳೂರು: ಓದದೇ ಇದ್ದರೂ ಪದವಿ ಕೊಡಿಸುವುದಾಗಿ ನಂಬಿಸಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನ ಬೆಂಗಳೂರು ಸಿಸಿಬಿ ಪೊಲೀಸರು ಪತ್ತೆಮಾಡಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನ ಸಿದ್ಧಪಡಿಸುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಪ್ರಮುಖ ಸೂತ್ರಧಾರ ಎನ್ನಲಾದ ಆರ್ಯನ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ʼ ಹೆಸರಿನಲ್ಲಿ ನಕಲಿ ಕಚೇರಿ ತೆರೆದಿದ್ದ. ವಿವಿಧ ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುತ್ತಿದ್ದ ಈತ, ಫ್ಲಾರೆನ್ಸ್, ಕಲಾನಿಕೇತನ್, ಎಂವಿಜೆ ಹಾಗೂ ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ.
ಕಾಲೇಜಿಗೆ ಹೋಗಿ ಓದದೇ ಇದ್ದರೂ ನೇರವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ, ಹಣ ಪಡೆದು ನಕಲಿ ಅಂಕಪಟ್ಟಿಗಳನ್ನ ಸಿದ್ಧಪಡಿಸಿ ಮನೆ ಬಾಗಿಲಿಗೆ ತಲುಪಿಸುತ್ತಿದ್ದ. ಡಿಟಿಡಿಸಿ ಮೂಲಕ ಮನೆ ಬಾಗಿಲಿಗೆ ಮಾರ್ಕ್ಸ್ ಕಾರ್ಡ್ ಕೊರಿಯರ್ ಮಾಡುತ್ತಿದ್ದ ಆರೋಪಿ ರಾಜಾರೆಡ್ಡಿ.
ಈ ದಂಧೆಯನ್ನ ವ್ಯವಸ್ಥಿತವಾಗಿ ನಡೆಸಲು ಕೋರಮಂಗಲದಲ್ಲಿ ಕಚೇರಿಯನ್ನೇ ತೆರೆದಿದ್ದ ರಾಜಾರೆಡ್ಡಿ, ಆರ್ಯನ್ ಎಂಬಾತನಿಂದ ಮಾರ್ಕ್ಸ್ ಕಾರ್ಡ್ ತಯಾರು ಮಾಡಿಸುತ್ತಿದ್ದ. ಈ ಕುರಿತು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.
ಮಾಹಿತಿ ಮೇರೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿ ರಾಜಾರೆಡ್ಡಿಯನ್ನ ಬಂಧಿಸಿದ್ದಾರೆ. ತನಿಖೆ ವೇಳೆ 50 ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನ ತಯಾರು ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಮತ್ತೊಬ್ಬ ಆರೋಪಿಗಾಗಿ ಆರ್ಯನ್ ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
Laxmi News 24×7