ಹಾವೇರಿ: ಕರ್ನಾಟಕದಲ್ಲಿ ಹರಳು ರೂಪದ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಇದರ ಬೇಡಿಕೆ ತಗ್ಗಿಸುವ ಉದ್ದೇಶದಿಂದ ದ್ರವ ರೂಪದ ‘ನ್ಯಾನೋ ಯೂರಿಯಾ’ ಬಳಸುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಪರಿಣಾಮ ಹಾವೇರಿ ಜಿಲ್ಲೆಯ, ಸವಣೂರು ತಾಲೂಕಿನ ಕೆಲವು ರೈತರು ಯೂರಿಯಾ ಗೊಬ್ಬರದ ಬದಲಿಗೆ ‘ನ್ಯಾನೋ ಯೂರಿಯಾ’ದ ಬಳಕೆಗೆ ಮುಂದಾಗಿದ್ದಾರೆ.
ರಾಜ್ಯದೆಲ್ಲೆಡೆ ಯೂರಿಯಾಗಾಗಿ ರೈತರು ಪರದಾಡುತ್ತಿರುವ ವರದಿಗಳು ಆಗುತ್ತಿದ್ದು, ಎಲ್ಲಿಯೂ ನಿರೀಕ್ಷಿತ ಪ್ರಮಾಣದಷ್ಟು ರಸಗೊಬ್ಬರ ದೊರೆಯುತ್ತಿಲ್ಲ. ಈ ಅಭಾವ ತಗ್ಗಿಸುವ ಹಿನ್ನೆಲೆಯಲ್ಲಿ ಹಾಗೂ ನಾನಾ ಕಾರಣಗಳಿಂದ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರಗಳ ಬಳಕೆಯನ್ನು ತಗ್ಗಿಸುವ ಉದ್ದೇಶದಿಂದ ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ ಹೆಚ್ಚುಪಟ್ಟು ಪರಿಣಾಮಕಾರಿಯಾಗಿರುವ ಜೊತೆಗೆ ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುವ ‘ನ್ಯಾನೋ ಯೂರಿಯಾ’ವನ್ನು ಬಳಕೆ ಮಾಡುವಂತೆ ಕೃಷಿ ಇಲಾಖೆಯ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ.ಇದಕ್ಕೂ ಮುನ್ನ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಹಿನ್ನೆಲೆ ರೈತರು ಯೂರಿಯಾ ಬಳಕೆ ಕಡಿಮೆ ಮಾಡುವಂತೆ ಹಾಗೂ ಪರ್ಯಾಯ ಗೊಬ್ಬರ, ಕೃಷಿ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಲು ಮುಂದಾಗುವಂತೆ ರೈತರಿಗೆ ಕರೆ ನೀಡಿದ್ದರು. ಇದರ ಪರಿಣಾಮ ಸವಣೂರು ಭಾಗದ ರೈತರು ಯೂರಿಯಾ ಪರ್ಯಾಯವಾಗಿ ‘ನ್ಯಾನೋ ಡಿಎಪಿ’, ‘ನ್ಯಾನೋ ಯೂರಿಯಾ’ದ ಮೊರೆ ಹೋಗಿದ್ದಾರೆ.
Laxmi News 24×7