ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಜನರ ಗುಂಪು ಸೇರುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ಐದು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆೆ ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ, ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ತೆಗೆದು ಹಾಕುವಂತೆ ಕೋರಿರುವ ಆರ್‌ಸಿಬಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಟಿ.ಎಂ.ನದಾಫ್ ಅವರ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.
ಸರ್ಕಾರದ ಪರ ವಕೀಲರ ವಾದ : ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ”ಸರ್ಕಾರದ ಅಧಿಕಾರಿಗಳು ಏನಾಗಬಹುದು ಎಂಬುದನ್ನು ಹೇಳುವರಾಗುವಂತೆ ನಿರೀಕ್ಷಿಸಲಾಗುವುದಿಲ್ಲ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 24 ತಾಸುಗಳ ಮುನ್ನ ಸೂಚನೆ ನೀಡಿದ್ದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ವಿಫಲರಾಗಿದ್ದಾರೆ. ಒಬ್ಬ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಘಟನೆಯ ದೃಷ್ಟಿಯಿಂದ ಅಧಿಕಾರಿಗಳನ್ನು ಅಮಾನತು ಮಾಡಿರುವುದರಲ್ಲಿ ದೋಷವಿಲ್ಲ ಎಂದು ತಿಳಿಸಿತ್ತು. ಅಲ್ಲದೆ, ವಿಕಾಸ್ ಕುಮಾರ್ ಹೊರತುಪಡಿಸಿ ಉಳಿದ ನಾಲ್ವರು ಪೊಲೀಸ್ ಅಧಿಕಾರಿಗಳು ಮರು ನೇಮಕಾತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದಾರೆ. ವಿಕಾಸ್ ಕುಮಾರ್ ಅವರು ಮನವಿ ನೀಡಲಿ. ಈ ಮಧ್ಯೆ, ಹಾಲಿ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದರು.
ಇದಕ್ಕೆ ಪೀಠ, ”ನಾಳೆಯೇ ವಿಕಾಸ್ ಕುಮಾರ್ ಅವರು ಸರ್ಕಾರಕ್ಕೆ ಮನವಿ ನೀಡಲಿ, ಆನಂತರ ನಿಮಗೆ (ಸರ್ಕಾರಕ್ಕೆ) ಎಷ್ಟು ಸಮಯ ಬೇಕು? ಮುಂದಿನ ಶುಕ್ರವಾರದೊಳಗೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಆದೇಶ ಮಾಡದಿದ್ದರೆ ನಾವು ಮಾಡುತ್ತೇವೆ” ಎಂದು ಮೌಖಿಕವಾಗಿ ತಿಳಿಸಿತು.
Laxmi News 24×7