ಬೆಳಗಾವಿ: ಉತ್ತಮ, ಸುರಕ್ಷಿತ ಬೆಳಗಾವಿ ನಗರ ನಿರ್ಮಾಣಕ್ಕೆ ಪೊಲೀಸ್ ಕಮಿಷನರ್ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಪೊಲೀಸ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗಾಗಿಯೇ ಒಂದು ಪೇಜ್ ತೆರೆದಿದ್ದಾರೆ. “ನನ್ನ ಬೆಳಗಾವಿಗಾಗಿ ನನ್ನ ಸಲಹೆ” ಎಂಬ ಘೋಷವಾಕ್ಯದಡಿ ಸಾರ್ವಜನಿಕರಿಗೆ ಸಲಹೆ ನೀಡುವಂತೆ ಕೋರಿದ್ದಾರೆ. ಇದರಿಂದ ಬೆಳಗಾವಿ ಪೊಲೀಸರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಹೌದು, ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಭೂಷಣ ಗುಲಾಬರಾವ್ ಬೊರಸೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹೊಚ್ಚ ಹೊಸ ಕಾರ್ಯಕ್ರಮಗಳ ಮೂಲಕ ಬೆಳಗಾವಿಯಲ್ಲಿ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ಚಾಕು, ಚೂರಿ ಸೇರಿ ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ಕಿಡಗೇಡಿಗಳ ವಿರುದ್ಧ ಕಾರ್ಯಾಚರಣೆಗೆ ಚುಚ್ಚು ನಿಯಂತ್ರಣ ತಂಡ ಆರಂಭಿಸಿದ್ದರು. ಪರಿಣಾಮಕಾರಿಯಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದು, ಸುಗಮ ಸಂಚಾರ, ಬಡೇಕೊಳ್ಳಮಠ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣ, ಮಾದಕ ವಸ್ತುಗಳ ವಿರುದ್ಧ ಸಮರ ಸೇರಿ ಹಲವು ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ.
ಈಗ “ನನ್ನ ಬೆಳಗಾವಿಗಾಗಿ ನನ್ನ ಸಲಹೆ” ಎಂಬ ವಿನೂತನ ಕಾರ್ಯಕ್ರಮವನ್ನು ಪೊಲೀಸ್ ಕಮಿಷನರ್ ಆರಂಭಿಸಿದ್ದಾರೆ. ತಮ್ಮ ಸುತ್ತಮುತ್ತಲೂ ಹಲವಾರು ಅಪರಾಧ-ಅಕ್ರಮ ಚಟುವಟಿಕೆಗಳು, ಅಕ್ರಮ ಸಾರಾಯಿ ದಂಧೆ, ಡ್ರಗ್ಸ್ ಮಾರಾಟ, ಹಲವು ವರ್ಷಗಳಿಂದ ಸಂಚಾರ ದಟ್ಟಣೆ ಸಮಸ್ಯೆ ಕಂಡು ಬರುತ್ತವೆ. ತಮ್ಮ ಕಣ್ಮುಂದೆ ನಡೆಯುತ್ತಿದ್ದರೂ ಪೊಲೀಸರಿಗೆ ತಿಳಿಸಲು ಹಿಂದೇಟು ಹಾಕುತ್ತಾರೆ. ಇಂತವರು ತಮ್ಮ ಮನೆಯಲ್ಲೇ ಇದ್ದುಕೊಂಡು ಈ ವೆಬ್ ಸೈಟ್ ಮೂಲಕ ಪೊಲೀಸರ ಗಮನಕ್ಕೆ ತರಬಹುದು. ತಾವು ಮಾಹಿತಿ ನೀಡಿದರೆ ಎಲ್ಲಿ ನಮಗೆ ತೊಂದರೆ ಆಗುತ್ತದೆ ಎನ್ನುವ ಭಯ ಇದ್ದರೆ ಅಂತಹವರ ಹೆಸರನ್ನು ಪೊಲೀಸರು ಬಹಿರಂಗಪಡಿಸುವುದಿಲ್ಲ. ಕಳೆದ ಎರಡು ದಿನಗಳ ಹಿಂದೆ ಈ ಅಭಿಯಾನ ಶುರುವಾಗಿದೆ.
ಹೇಗೆ ಸಲಹೆ ನೀಡಬೇಕು?: https://belagavicitypolice.karnataka.gov.in/public-feedback-form/kn ಇದು ಬೆಳಗಾವಿ ಪೊಲೀಸ್ ವೆಬ್ ಸೈಟ್. ಇದರಲ್ಲಿ ನನ್ನ ಬೆಳಗಾವಿಗಾಗಿ ನನ್ನ ಸಲಹೆ ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿದಾಗ ಸಾರ್ವಜನಿಕ ಅಭಿಪ್ರಾಯ ಪುಟ(ಪೇಜ್) ಬರುತ್ತದೆ. ಇದರಲ್ಲಿ “ನನ್ನ ಬೆಳಗಾವಿ ನಗರಗಾಗಿ ನನ್ನ ಸಲಹೆ” ಘೋಷವಾಕ್ಯದಡಿ ಸಲಹೆ ನೀಡಲು ಅವಕಾಶ ನೀಡಲಾಗಿದೆ.
ಹೆಸರು ಕಾಲಂನಲ್ಲಿ ಮೊದಲಿಗೆ ತಮಗೆ ಇಷ್ಟ ಇದ್ದರೆ ಹೆಸರು ಬರೆಯಬಹುದು. ವಿಷಯದಲ್ಲಿ ತಮ್ಮ ಸಮಸ್ಯೆ ಅಥವಾ ಸಲಹೆ ನಮೂದಿಸಬೇಕು. ಪ್ರದೇಶದಲ್ಲಿ ಯಾವ ಸ್ಥಳದ ಸಮಸ್ಯೆ ಎಂಬುದನ್ನು ತಿಳಿಸಬೇಕು. ಕಡತ ಅಪ್ ಲೋಡ್ ನಲ್ಲಿ ಸಂಬಂಧಿಸಿದ ವೀಡಿಯೊ, ಫೋಟೋ ಹಾಕಬೇಕು. ಬಳಿಕ ಸುಧಾರಣೆಗೆ ಸಲಹೆ ಬಾಕ್ಸ್ ನಲ್ಲಿ ಸಮಸ್ಯೆ ಪರಿಹರಿಸಲು ಯಾವ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ವಿವರಿಸಬೇಕು.
ಇದೆಲ್ಲಾ ಭರ್ತಿ ಆದ ಬಳಿಕ ಕ್ಯಾಪ್ಚಾ ತುಂಬಿ, ಸಬ್ ಮಿಟ್ ಮಾಡಬೇಕು. ಹೀಗೆ ಬಂದ ಸಲಹೆಯನ್ನು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕದ ಸಿಬ್ಬಂದಿ ಪರಿಶೀಲಿಸಿ ಸಂಬಂಧಿಸಿದ ಠಾಣೆಗಳಿಗೆ ಮಾಹಿತಿ ರವಾನಿಸುತ್ತಾರೆ. ಅವರು ಕ್ರಮ ವಹಿಸಲಿದ್ದಾರೆ. ಸಮಸ್ಯೆ ಪರಿಹಾರವಾದ ಬಳಿಕ ಸಲಹೆ ನೀಡಿದವರಿಗೆ ಉತ್ತರ ನೀಡಲಾಗುತ್ತದೆ ಎಂದು ಪಿಎಸ್ಐ ರಾಮಪ್ಪ ಕರಿಕಟ್ಟಿ ಈಟಿವಿ ಭಾರತಕ್ಕೆ ವಿವರಿಸಿದರು.
ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ಬೊರಸೆ ಮಾತನಾಡಿ, ಪ್ರತಿಯೊಬ್ಬರಿಗೂ ಪೊಲೀಸ್ ಕಮಿಷನರ್ ಕಚೇರಿ, ಪೊಲೀಸ್ ಠಾಣೆಗಳಿಗೆ ಬರಲು ಸಾಧ್ಯವಾಗುವುದಿಲ್ಲ. ಅವರ ಕೆಲಸಗಳಲ್ಲಿ ಎಲ್ಲರೂ ಬ್ಯುಜಿ ಇರುತ್ತಾರೆ. ಅಲ್ಲದೇ ಇದು ತಂತ್ರಜ್ಞಾನದ ಯುಗ. ಹಾಗಾಗಿ, ಮನೆಯಲ್ಲೆ ಕುಳಿತುಕೊಂಡು ತಮ್ಮ ಸುತ್ತಲಿನ ಸಮಸ್ಯೆಗಳ ಕುರಿತು ಅದರಲ್ಲಿ ತಾವು ಸಲಹೆ ನೀಡಬಹುದು. ಸಂಚಾರ ಸಮಸ್ಯೆ, ಅಪಘಾತ, ಡ್ರಗ್ಸ್ ಸಾಗಾಟ, ಕಾಲೇಜಿನಲ್ಲಿ ಹುಡುಗಿಯರ ಚುಡಾಯಿಸುವುದು ಸೇರಿ ಮತ್ತಿತರ ವಿಷಯಗಳ ಬಗ್ಗೆ ನಮ್ಮ ಗಮನಕ್ಕೆ ತರಬಹುದಾಗಿದೆ ಎಂದರು.
ಸಲಹೆ ನೀಡವರು ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನೀಡಬಹುದು. ಇಲ್ಲವೇ ನೀಡದೆಯೂ ಇರಬಹುದು. ಎರಡೂ ಅವಕಾಶ ಕಲ್ಪಿಸಲಾಗಿದೆ. ಡ್ರಗ್ಸ್, ಅಕ್ರಮ ಸಾರಾಯಿ ಮಾರಾಟದಂತ ಪ್ರಕರಣಗಳ ಬಗ್ಗೆ ತಮ್ಮ ಹೆಸರು ಹೇಳಲು ಕೆಲವರಿಗೆ ಭಯ ಇರುತ್ತದೆ. ಹಾಗಾಗಿ, ಅವರು ಕೇವಲ ಸಲಹೆ ಮಾತ್ರ ನೀಡಬಹುದು. ನಾವು ಅವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಇನ್ನು ವಯಕ್ತಿಕ ಜಗಳಗಳ ಕುರಿತು ಬರುವ ಸಲಹೆಗಳನ್ನು ಪರಿಗಣಿಸುವುದಿಲ್ಲ. ಉತ್ತಮ ಬೆಳಗಾವಿ ನಿರ್ಮಾಣಕ್ಕೆ ತಾವು ಕೊಡುವ ಸಲಹೆ ಸ್ವೀಕರಿಸಿ, ಪರಿಶೀಲಿಸಿ ಏನು ಸುಧಾರಣೆ ಮಾಡಬೇಕೊ ಮಾಡುತ್ತೇವೆ. ಕೆಲ ಸಾರ್ವಜನಿಕರು ಒಳ್ಳೆಯ ಹೆಜ್ಜೆ ಇಡುತ್ತಿದ್ದಿರಿ ಎಂದು ಶುಭಾಶಯ ಕೋರಿದ್ದಾರೆ. ಬರುವ ದಿನಗಳಲ್ಲಿ ಇದಕ್ಕೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಪೊಲೀಸ್ ಕಮಿಷನರ್ ವಿಶ್ವಾಸ.
Laxmi News 24×7