ಬಹುಭಾಷಾ ಚಿತ್ರನಟಿ ಬಿ.ಸರೋಜಾದೇವಿ ಇನ್ನಿಲ್ಲ…
ಅಭಿನಯ ಸರಸ್ವತಿ ಖ್ಯಾತಿಯ ಬಿ.ಸರೋಜಾದೇವಿ ಕೊನೆಯುಸಿರೆಳೆದಿದ್ದಾರೆ. ಕನ್ನಡದ ಖ್ಯಾತ ನಟಿಗೆ 87 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜನಪ್ರಿಯ ತಾರೆ ವಿಧಿವಶರಾಗಿದ್ದು, ಸಂತಾಪ ವ್ಯಕ್ತವಾಗುತ್ತಿದೆ. ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಹೆಸರುವಾಸಿಯಾಗಿದ್ದರು. ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.
ಜನವರಿ 7, 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಸ್ಯಾಂಡಲ್ವುಡ್ ಅಲ್ಲದೇ ಬಹುಭಾಷಾ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರೀಗ ಇಹಲೋಕದ ಪಯಣ ಮುಗಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತರಾದ ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೊಬ್ಬರಾಗಿ ಗುರುತಿಸಿಕೊಂಡವರು.
ಸರೋಜಾದೇವಿ ಅವರು ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಟಿ. ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಶ್ರೀ ರೇಣುಕಾದೇವಿ ಮಹಾತ್ಮೆ,
ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯೆ, ಬೆಟ್ಟದ ಹೂವು, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ತಿರುಮಣಂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು.
ತಮಿಳಿನ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗಾ ಕೆ ರಖನಾ, ಮಲಯಾಳಂನ ಮುತ್ತು ಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.ಸುಮಾರು 6 ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಸೇವೆ ಒದಗಿಸಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ತಮ್ಮ ಅಮೋಘ ಅಭಿನಯಕ್ಕೆ ಹಲವು ಉನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಭೂಷಣ ಪುರಸ್ಕೃತರೂ ಹೌದು. ಕೊಡಿಗೆಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗ ಸಿದ್ದತೆ ನಡೆಸುತ್ತಿದೆ. ಪತಿ ಹರ್ಷ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಲ್ಲೆಶ್ವರಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.
ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
Laxmi News 24×7