Breaking News

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the love

ಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದ್ದ ಆದೇಶವನ್ನು ರದ್ದು ಮಾಡಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಆದೇಶ ಪ್ರಶ್ನಿಸಿ, ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿಯವರೆಗೂ ವಿಕಾಸ್ ಕುಮಾರ್ ಅವರು ಕರ್ತವ್ಯಕ್ಕೆ ಮರು ನೇಮಕಕ್ಕೆ ಒತ್ತಾಯಿಸಬಾರದು ಎಂದು ಹೈಕೋರ್ಟ್ ಇಂದು ಮೌಖಿಕವಾಗಿ ಸೂಚನೆ ನೀಡಿತು.

ವಿಕಾಸ್​​ ಕುಮಾರ್ ಅವರ ಅಮಾನತು ಆದೇಶ ರದ್ದುಪಡಿಸಿದ್ದ ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ಘಟನೆ ಸಂಬಂಧ ಅಧಿಕಾರಿಗಳನ್ನು ಬೇರೊಂದು ಕಡೆ ವರ್ಗಾವಣೆ ಮಾಡಬಹುದಿತ್ತೇ?. ಇಲ್ಲವೇ ಅಮಾನತು ಮಾಡಿರುವ ಕ್ರಮ ಸಮರ್ಪಕವಾಗಿದಿಯೇ ಎಂಬುದನ್ನು ರಾಜ್ಯ ಸರ್ಕಾರ ವಿವರವಾಗಿ ತಿಳಿಸಬೇಕು. ಅಧಿಕಾರಿಗಳ ಅಮಾನತು ಮಾಡಿರುವ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಪೀಠ ಹೇಳಿದೆ.

ಈ ವೇಳೆ ಹಾಜರಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕರ್ತವ್ಯಲೋಪಕ್ಕೆ ಕುರಿತ ದಾಖಲೆಗಳನ್ನು ಒದಗಿಸಲಾಗುವುದು. ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಿಎಟಿ ಆದೇಶಕ್ಕೆ ತಡೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ವಿಕಾಸ್ ಕುಮಾರ್ ಪರ ವಕೀಲರು, ಸಿಎಟಿ ಆದೇಶದ ಅನ್ವಯ ಅಧಿಕಾರಿಗಳನ್ನು ಮರು ನೇಮಕ ಮಾಡದಿದ್ದಲ್ಲಿ ತಕ್ಷಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ