ಕಲಬುರ್ಗಿ(ಡಿಸೆಂಬರ್. 16): ಕಲ್ಯಾಣ ಕರ್ನಾಟಕಕ್ಕೂ ತಿರುಪತಿಗೂ ಅವಿನಾಭಾವ ಸಂಬಂಧ. ಒಂದು ಕಾಲಕ್ಕೆ ತಿರುಪತಿ ಮೇಲೆ ದಾಳಿ ನಡೆದಂತಹ ಸಂದರ್ಭದಲ್ಲಿ ಕ್ಷೇತ್ರದ ಸಂರಕ್ಷಣೆಗೆ ನಿಂತವರು ಸುರಪುರ ಸಂಸ್ಥಾನದ ದೊರೆಗಳು. ಅದೇ ಕಾರಣಕ್ಕೆ ವಿಜಯದಶಮಿ ಸಂದರ್ಭದಲ್ಲಿ ತಿರುಪತಿಯಲ್ಲಿ ನಡೆಯುವ ಬ್ರಹ್ಮತ್ಸವದಲ್ಲಿ ಮೊದಲ ಪೂಜೆ ನಡೆಯುವುದು ಸುರಪುರ ದೊರೆಗಳದ್ದು. ಈಗಲೂ ಸಹ ಸುರಪುರ ಸಂಸ್ಥಾನವನ್ನು ಪ್ರತಿನಿಧಿಸುವವರಿಗೆ ಅಗ್ರ ಪೂಜೆಯ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ತಿರುಪತಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ಬಗ್ಗೆ ಒಂದಷ್ಟು ಪ್ರೀತ್ಯಾದರಗಳಿವೆ. ಪ್ರತಿ ವರ್ಷವೂ ಬ್ರಹ್ಮೋತ್ಸವ ಇತ್ಯದಿಗಳ ಸಂದರ್ಭದಲ್ಲಿ ಕಲ್ಯಾಣ ಕರ್ನಾಟದಿಂದ ಹಲವಾರು ಜನ ಭಾಗಿಯಾಗುತ್ತಾರೆ. ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬಹುತೇಕ ಭಾಗಗಳಿಂದ ತಿರುಪತಿಗೆ ನೇರವಾಗಿ ಬಸ್ ಗಳಿಲ್ಲ. ಎಲ್ಲರೂ ರೈಲು ಅಥವಾ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ತಿರುಪತಿಗೆ ತೆರಳಲು ಹೆಚ್ಚು ಸಮಯ ವ್ಯಯಿಸುವುದು ಅನಿವಾರ್ಯವಾಗಿದ್ದ ಸಂದರ್ಭದಲ್ಲಿಯೇ ತಿರುಪತಿ ತಿಮ್ಮಪ್ಪ ಕಲ್ಯಾಣ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಕೇವಲ 1 ಗಂಟೆ 5 ನಿಮಿಷದಲ್ಲಿ ಕಲಬುರ್ಗಿಯಿಂದ ತಿರುಪತಿಗೆ ಹೋಗೋ ಅವಕಾಶವನ್ನು ಜನ ಪಡೆದಿದ್ದಾರೆ.
ಕಲ್ಯಾಣ ಕರ್ನಾಟಕದ ಜನತೆಗೆ ಹೊಸ ವರ್ಷಕ್ಕೆ ಮತ್ತೊಂದು ವಿಮಾನ ಕೊಡುಗೆ ರೂಪದಲ್ಲಿ ಸಿಗುತ್ತಿದೆ. 2021ರ ಜನವರಿಯಿಂದ ಕಲಬುರ್ಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಗೊಳ್ಳುತ್ತಿದೆ. ಸ್ಟಾರ್ ಏರ್ ಕಲಬುರ್ಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಲು ತೀರ್ಮಾನಿಸಿದೆ. ಜನವರಿ 11 ರಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ತಿರುಪತಿಗೆ ವಿಮಾನಯಾನದ ಸೌಲಭ್ಯ ಸಿಗಲಿದೆ.ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಬೇಕೆಂಬ ಬಹುದಿನಗಳ ಕನಸು ಕೊನೆಗೂ ನನಸಾದಂತಾಗಿದೆ.
Laxmi News 24×7